ಉಜಿರೆ: ಕನ್ಯಾಡಿ ಸೇವಾಭಾರತಿ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಕೊಕ್ಕಡ ಶ್ರೀ ರಾಮ ಸೇವಾ ಟ್ರಸ್ಟ್ ಮತ್ತು ಕನ್ಯಾಡಿ ಶ್ರೀ ದುರ್ಗಾ ಮಾತೃ ಮಂಡಳಿ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ನಡೆಸಿದ ಒಂದು ತಿಂಗಳ ಅವಧಿಯ 28ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಅ.17ರಂದು ಕೊಕ್ಕಡದ ಶ್ರೀರಾಮ ಸೇವಾ ಮಂದಿರದಲ್ಲಿ ನಡೆಯಿತು.
ಕೊಕ್ಕಡ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಕೃಷ್ಣ ಭಟ್ ಮಾತನಾಡಿ, ಕೊಕ್ಕಡದ ಗ್ರಾಮೀಣ ಜನರಿಗೆ ಸ್ವ ಉದ್ಯೋಗ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟರುವುದು ಸಂತೋಷದ ವಿಷಯ ಹಾಗೂ ಸೇವಾಭಾರತಿ ಸಂಸ್ಥೆಯು ನಡೆಸುವ ಸೇವೆಗಳ ಬಗ್ಗೆ ಶ್ಲಾಘಿಸಿ ಇನ್ನಷ್ಟು ಸೇವೆಯನ್ನು ಮಾಡುವ ಯಶಸ್ಸು ನಿಮ್ಮದಾಗಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕನ್ಯಾಡಿ ಸೇವಾಭಾರತಿ ಸಂಸ್ಥೆಯ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ಸಿಇಒ ಸ್ವರ್ಣಗೌರಿ ಮಾತನಾಡಿ, ಟೈಲರಿಂಗ್ ಕಲಿಯುವುದರಿಂದ ಬೇರೆ ಬೇರೆ ರೀತಿಯ ಸ್ವ ಉದ್ಯೋಗದ ಅವಕಾಶವಿರುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಯಾರಿಗೂ ಅವಲಂಬಿತರಾಗದೆ ಸ್ವಾವಲಂಬಿ ಜೀವನವನ್ನು ನಡೆಸುವುದು ಅತ್ಯಗತ್ಯವೆಂದು ನುಡಿದರು.
ಕಾರ್ಯಕ್ರಮದಲ್ಲಿ ಟೈಲರಿಂಗ್ ತರಬೇತುದಾರೆ ಗೀತಾ ತರಬೇತಿಯಲ್ಲಿ ತಿಳಿಸಿಕೊಟ್ಟ ಹೊಲಿಗೆಯ ವಿಧಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ, ತಮಗೆ ಶಿಬಿರಾರ್ಥಿಗಳಿಂದ ಕಲಿಯುವ ಸಂದರ್ಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿತ್ತು ಎಂದು ಸಂತಸ ವ್ಯಕ್ತಪಡಿಸಿದರು. ಶ್ರೀ ದುರ್ಗಾ ಮಾತೃ ಮಂಡಳಿ ಹಾಗೂ ಕೊಕ್ಕಡದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಸೇವಭಾರತಿ ಸಂಸ್ಥೆಗೆ 2 ಟೈಲರಿಂಗ್ ಮಿಶಿನ್ ಅನ್ನು ನೀಡಿ ಮಹಿಳೆಯರ ಸ್ವ ಉದ್ಯೋಗಕ್ಕೆ ದಾರಿದೀಪವಾಗಿದ್ದಾರೆ.
ಸಂಸ್ಥೆಯ ಪರವಾಗಿ ಗೀತಾ ಹಾಗೂ 1 ತಿಂಗಳುಗಳ ಕಾಲ ಶಿಬಿರ ನಡೆಸಲು ಸಂಪೂರ್ಣ ಸಹಕಾರವನ್ನು ನೀಡಿದ ಪುರುಷೋತ್ತಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಹಾಗೂ ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಉಪಾಧ್ಯಕ್ಷ ಈಶ್ವರ್ ಭಟ್ ಹಿತ್ತಿಲು, ಶ್ರೀರಾಮ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಸೇವಾಭಾರತಿ ಕಾರ್ಯದರ್ಶಿ ಬಾಲಕೃಷ್ಣ, ದುರ್ಗಾ ಮಾತೃ ಮಂಡಳಿಯ ಖಜಾಂಚಿ ಬಬಿತಾ, ಸದಸ್ಯೆ ಸುಮತಿ ಟೈಲರಿಂಗ್ ತರಬೇತುದಾರೆ ಗೀತಾ ಕೊಕ್ಕಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಭಾರತಿ ಅಕೌಂಟೆಂಟ್ ಅಕ್ಷತಾ ಸ್ವಾಗತಿಸಿ, ಡಾಕ್ಯುಮೆಂಟೇಶನ್, ಮಾನಿಟರಿಂಗ್ ಮತ್ತು ಇವಲ್ಯೂವೇಟಿಂಗ್ ಕಾರ್ಡಿನೇಟರ್ ಸುಮ ಕಾರ್ಯಕ್ರಮ ನಿರೂಪಿಸಿ, ಶ್ರೀರಾಮ ಸೇವಾ ಟ್ರಸ್ಟ್ ಸದಸ್ಯೆ ಪ್ರಮೀಳಾ ವಂದಿಸಿದರು. ಒಂದು ತಿಂಗಳ ಕಾಲ ನಡೆದ ಉಚಿತ ಶಿಬಿರದಲ್ಲಿ ಒಟ್ಟು 63 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.