ಉಜಿರೆ: ಅಗಲಿದ ಇಚ್ಚಿಲ ಸುಂದರ ಗೌಡರಿಗೆ ನುಡಿನಮನ

0

ಉಜಿರೆ: ಉಜಿರೆಯ ಇತಿಹಾಸದ ಚಿತ್ರಣ ಬದಲಿಸಿದ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಇಚ್ಚಿಲ ಸುಂದರ ಗೌಡರೂ ಓರ್ವರು. ಸಹಕಾರ, ಉದ್ಯಮ, ರಾಜಕೀಯ ನೇತಾರರಾಗಿ ಎಲ್ಲರಲ್ಲಿ ಆತ್ಮೀಯರಾಗಿ ಅಚ್ಚಳಿಯದ ಹೆಸರು ಗಳಿಸಿದವರು. ಎಲ್ಲರೊಂದಿಗೆ ಬೆರೆತು ಸಾಮಾನ್ಯರ ಕಷ್ಟ, ಸುಖಗಳಲ್ಲಿ ಸಹಭಾಗಿಗಳಾಗಿ ಸಮಾಜದಲ್ಲಿ ತನ್ನದೇ ವಿಶೇಷ ಛಾಪು ಮೂಡಿಸಿದವರು. ಅವರ ಆದರ್ಶ, ಒಳ್ಳೆಯ ಗುಣಗಳನ್ನು ಪಾಲಿಸುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ನುಡಿನಮನ. ಅವರು ಯಾವುದೇ ಜಾತಿಗೆ ಸೀಮಿತರಾಗದೆ ಎಲ್ಲರನ್ನೂ ಕರೆದು ಮಾತನಾಡಿ, ಬಡವರಿಗೆ ಸಹಾಯಮಾಡಿ, ಬಂದವರನ್ನು ಬರಿಗೈಯಲ್ಲಿ ಹಿಂದೆ ಕಳಿಸಿದವರಲ್ಲ. ಕಷ್ಟ ನಷ್ಟ ಅನುಭವಿಸಿಯೂ ಸಹಕಾರ, ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಅವರು ಉಜಿರೆಯ ರತ್ನ. ಅವರ ಅಗಲಿಕೆ ಉಜಿರೆಗೆ ಮಾತ್ರವಲ್ಲ ಇಡೀ ತಾಲೂಕಿಗೆ ತುಂಬಲಾರದ ನಷ್ಟ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ನುಡಿದರು.

ಅವರು ಅ.18ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಇತ್ತೀಚೆಗೆ ನಿಧನರಾದ ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉದ್ಯಮಿ, ರಾಜಕೀಯ ಧುರೀಣ ಇಚ್ಚಿಲ ಸುಂದರ ಗೌಡರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು.

ಮಾಜಿ ಸಚಿವ ಗಂಗಾಧರ ಗೌಡ ಅವರು ಆಸ್ಪತ್ರೆಗ ಸೇರಿದಾಗ ಆರೋಗ್ಯದ ಮಹತ್ವ , ಜೈಲು ಸೇರಿದಾಗ ಸ್ವಾತಂತ್ರ್ಯದ ಮಹತ್ವ ಹಾಗೂ ಸ್ಮಶಾನದಲ್ಲಿ ವೈರಾಗ್ಯ ನೆನಪು ಮೂಡುವುದು ಸಹಜ. ಇಚ್ಚಿಲ ಸುಂದರ ಗೌಡರು ಎಂದೂ ಆಸ್ಪತ್ರೆಗೆ ಸೇರಿದವರಲ್ಲ. ಅವರ ಸಾಧನೆ ಶಾಶ್ವತವಾದುದು. ಅವರು ಉಜಿರೆಯ ಸೊಸೈಟಿಗೆ ಸರ್ವ ತ್ಯಾಗ ಮಾಡಿದವರು ಎಂದು ನುಡಿದರು.

ಕಾಂಗ್ರೆಸ್ ನಾಯಕ ರಕ್ಷಿತ್ ಶಿವರಾಂ ಸುಂದರ ಗೌಡರು ಪಕ್ಷದ ಹೆಮ್ಮೆಯ ನಾಯಕರಾಗಿ ಶಾಸಕರಾಗುವ ಅರ್ಹತೆ ಹೊಂದಿದ್ದರೂ, ರಾಜಕೀಯ ಕಾಲಚಕ್ರದಲ್ಲಿದ್ದರೂ ಜನರ ಸಮಸ್ಯೆಗೆ ನಿರಂತರ ಪರಿಹಾರ ಒದಗಿಸಿದವರು. ಉತ್ಸಾಹ, ಲವಲವಿಕೆ, ಅಚಲ ನಂಬಿಕೆಯಿಂದ ಸಹಕಾರ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದವರು. ಅವರು ಕುಟುಂಬಕ್ಕೆ ಏನೂ ಮಾಡಿಲ್ಲ. ನಾವು ಅವರ ಕುಟುಂಬದ ಜತೆಗಿರಬೇಕು ಎಂದು ನುಡಿದರು.

ಮಾಜಿ ವಿ.ಪ.ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೈಸ್ಕೂಲ್ ನಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಜತೆಯಾಗಿ ಪರಿಚಿತರಾದ ಸುಂದರ ಗೌಡರು ಸ್ನೇಹಮಯಿ, ಸಮಾಜಸೇವೆ, ಉದ್ಯಮದಿಂದ ಜನರ ಪ್ರೀತಿಗೆ ಪಾತ್ರರಾದವರು. ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯಾಗಿ, ಜಿ.ಪಂ., ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಕೆಲಸಮಾಡಿದವರು. ಧೈರ್ಯಶಾಲಿಯಾಗಿ ಸವಾಲನ್ನು ಎದುರಿಸಿ ಉದ್ಯಮದಲ್ಲಿ ಹಣ ಸಂಪಾದನೆಗಿಂತ ಹೆಚ್ಚು ಸಾರ್ವಜನಿಕ ಸೇವೆಯಲ್ಲಿ ಖರ್ಚು ಮಾಡಿದವರು ಎಂದು ನುಡಿನಮನ ಸಲ್ಲಿಸಿದರು.

ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ ವ್ಯಕ್ತಿ ಸಮಾಜದಲ್ಲಿರುವವರ ಒಡನಾಟದಿಂದ ಸ್ವರ್ಗೀಯರಾದಾಗ ಜನರ ನುಡಿ, ಪಶ್ಚಾತ್ತಾಪದಿಂದ ಅವರ ಗುಣದ ಅರಿವಾಗುತ್ತದೆ. ಮಂಡಲ ಪಂಚಾಯತ್ ನಿಂದ ಗ್ರಾಮ ಪಂಚಾಯತ್ ವರೆಗಿನ ಕಳೆದ 30 ವರ್ಷಗಳಲ್ಲಿ ತಾನು ಕಂಡುಕೊಂಡಂತೆ ಅವರು ಜನಾನುರಾಗಿ ವ್ಯಕ್ತಿಗಳ ಮಧ್ಯೆ ಗ್ರಾಮದ ಅಭಿವೃದ್ಧಿಯ ಮಹಾನ್ ಚೇತನ. ಅವರು ಕೈಯಾಡಿಸದ ಕ್ಷೇತ್ರವಿಲ್ಲ. ನೂರಕ್ಕೂ ಹೆಚ್ಚು ಹಸುಗಳನ್ನು ಸಾಕಿ ಹೈನುಗಾರಿಕೆಯಿಂದ ಸಾಧಿಸಬೇಕೆಂಬ ತವಕ ಹೊಂದಿದ್ದು ಇನ್ನಷ್ಟು ಎತ್ತರಕ್ಕೆ ಏರಬೇಕಾದವರು. ತಾಲೂಕಿನ ಎಂ.ಎಲ್.ಎ ಅಭ್ಯರ್ಥಿಯಾಗಬೇಕಾಗಿದ್ದ ಅವರು ಉಜಿರೆಗೆ ನೀಡಿದ ಕೊಡುಗೆ ಅನನ್ಯ. ಅವರು ಗಳಿಸಿಕೊಂಡದ್ದು ಅಪಾರವಾದರೂ ಉಳಿಸಿಕೊಂಡದ್ದು ಕಡಿಮೆ ಎಂದರು.

ಪದ್ಮಗೌಡ ಮಾತನಾಡಿ ಸುಂದರ ಗೌಡ ಅವರು ರಾಜಕೀಯ, ಸಾಮಾಜಿಕ, ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ, ಚುನಾವಣೆಯ ಸ್ಪರ್ಧೆಯಲ್ಲಿ ಅವರೆದುರು ತಾನು ಸೋತರೂ ಅವರ ಆತ್ಮೀಯತೆ ದೂರವಾಗಿಲ್ಲ. ಅವರ ಅಗಲಿಕೆ ನಂಬಲಸಾಧ್ಯವಾಗಿತ್ತು ಎಂದು ನುಡಿದರು. ಕಾರ್ಯಕ್ರಮ ನಿರೂಪಿಸಿದ ಉಜಿರೆ ಪ್ರಾ.ಕ್ರ.ಪ. ಸಹಕಾರಿ ಸಂಘದ ಸಿಬ್ಬಂದಿ ಮೋಹನ ಗೌಡ, ಸುಂದರ ಗೌಡರು 42 ವರ್ಷಗಳ ಕಾಲ ಸಂಘದ ಸದಸ್ಯರಾಗಿ, 39 ವರ್ಷಗಳ ಕಾಲ ಅಧ್ಯಕ್ಷರಾಗಿ, ಸಹಕಾರಿ ಯೂನಿಯನ್ ಉಪಾಧ್ಯಕ್ಷರಾಗಿ, ನವೋದಯ ಗ್ರಾಮಾಭಿವೃದ್ಧಿ ಸಂಘದ ನಿರ್ದೇಶಕರಾಗಿ, ಎ.ಪಿ.ಎಂ.ಸಿ. ಮತ್ತು ರಬ್ಬರ್ ಸೊಸೈಟಿ ನಿರ್ದೇಶಕರಾಗಿ ಸಮಾಜದಲ್ಲಿ ಬಹುಮುಖ ಸೇವೆ ಸಲ್ಲಿಸಿ, ಬಡವರ ಮಕ್ಕಳ ಮದುವೆಗೆ ಆರ್ಥಿಕ ನೆರವಿನ ಸಾಲ ಒದಗಿಸಿ ಉಪಕರಿಸಿದವರು, ಚಿನ್ಮಯಿ ಇಂಡಸ್ಟ್ರಿ ಉದ್ಯಮ ಸ್ಥಾಪಿಸಿ ಸಿಮೆಂಟ್ ದಾರಂದ, ಕಿಟಿಕಿ, ಬಾಗಿಲು ಉದ್ಯಮವನ್ನು ರಚಿಸಿ, ಬೆಳೆಸಿದವರು ಎಂದು ನುಡಿದರು.

ಅಗಲಿದ ಇಚ್ಚಿಲ ಸುಂದರ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ದಿವ್ಯಾತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ಎಂ. ಜಿ. ಶೆಟ್ಟಿ, ರಂಜನ್ ಗೌಡ, ಶ್ರೀಧರ ಭಿಡೆ, ರಾಜು ಶೆಟ್ಟಿ, ಯೋಗೀಶ್ ಕುಮಾರ್, ಉಜಿರೆ ಗ್ರಾ. ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್, ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಪ್ರವೀಣ್ ಫೆರ್ನಾಂಡಿಸ್, ತಾಲೂಕಿನ ಅಭಿಮಾನಿಗಳು, ಉಜಿರೆಯ ನಾಗರಿಕರು, ಸೊಸೈಟಿಯ ನಿರ್ದೇಶಕರು, ಸಿಬ್ಬಂದಿ ವರ್ಗ, ಸುಂದರ ಗೌಡರ ಮಕ್ಕಳು ಹಾಗು ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here