ಬೆಳ್ತಂಗಡಿ: ಮ್ಯೂಸಿಯಂಗಳು ಭೌತಿಕ ಸಂಶೋಧನೆಗಳಿಗೆ ಬಹುದೊಡ್ಡ ಸಂಪನ್ಮೂಲ. ಇದನ್ನು ಸಂರಕ್ಷಿಸಿಕೊಂಡು ಮುಂದಿನ ತಲೆಮಾರಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇವುಗಳು ಈ ನೆಲದ ಸಂಪತ್ತು ಎಂದು ಧರ್ಮಸ್ಥಳದ ಮಂಜೂಷ ಮ್ಯೂಸಿಯಂ ನ ಮೇಲ್ವಿಚಾರಕ ರಿತೇಶ್ ಅಭಿಪ್ರಾಯಪಟ್ಟರು.
ಇವರು ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ರೋಟರಿ ಸೇವಾ ಭವನ ಕಾಶಿಬೆಟ್ಟು, ರೊ.ಕೆ ರಮಾನಂದ ಸಾಲಿಯಾನ್ ಸಭಾಂಗಣದಲ್ಲಿ ನಡೆದ ‘ಮ್ಯೂಸಿಯಂ ಆಳ- ಅಗಲ’ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಮ್ಯೂಸಿಯಂ ಕಟ್ಟಲು ಮತ್ತು ಅದನ್ನು ಸದಾ ಸಂರಕ್ಷಿಸಲು ಸ್ಥಳಿಯ ತಾಪಮಾನ ಮತ್ತು ಪರಿಸ್ಥಿತಿಗಳು ಬಹು ಮುಖ್ಯ ಪಾತ್ರ ವಹಿಸುತ್ತದೆ. ಇತಿಹಾಸವುಳ್ಳ ಮಹತ್ವಪೂರ್ಣವಾದ ವಸ್ತುಗಳ ಸಂಗ್ರಹಣೆ, ಸಂಶೋಧನೆ ಮತ್ತು ಸಂರಕ್ಷಣೆಗೆ ಮ್ಯೂಸಿಯಂಗಳು ಸದಾ ನಿಗಾವಹಿಸಬೇಕು. ಇದಕ್ಕೆ ಧರ್ಮಸ್ಥಳದ ಮಂಜೂಷ ಮ್ಯೂಸಿಯಂ ನಿದರ್ಶನವಾಗಿ ಕಾಣಬವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಅನಂತ ಭಟ್ ಮಾತನಾಡಿ, ಮ್ಯೂಸಿಯಂಗಳಿಗೆ ಯಾವುದೇ ಜಾತಿ-ಧರ್ಮಗಳ ಹಂಗಿಲ್ಲ. ಜ್ಜಾನದ ಜೊತೆಗೆ ಕುತೂಹಲ ಮತ್ತು ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿ ಮ್ಯೂಸಿಯಂಗಳ ಲಾಭ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೊ. ಶ್ರೀಧರ್ ಕೆ ವಿ, ರೊ.ನಿವೃತ್ತ ಮೆ.ಜ.ಎಮ್ ವೆಂಕಟೇಶ್ವರ ಭಟ್ ಹಾಗು ಇತರೆ ಸದಸ್ಯರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ವಂದಿಸಿದರು.