ಮೂಡುಬಿದಿರೆ: ಎಕ್ಸಲೆ೦ಟ್ ನಲ್ಲಿ ಸರ್ವ ಧರ್ಮ ಅರಿವು ಕಾರ್ಯಕ್ರಮ- ಸಹಿಷ್ಣುತೆ, ಸಹಾನುಭೂತಿ ಎಲ್ಲಾ ಧರ್ಮಗಳ ಆಧಾರ: ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪ೦ಡಿತಾಚಾರ್ಯವರ್ಯ 

0

ಮೂಡುಬಿದಿರೆ: ಮಾಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯಲ್ಲಿ ಗಾ೦ಧಿ ಜಯ೦ತಿಯ ಪ್ರಯುಕ್ತ ಹಮ್ಮಿಕೊ೦ಡಿದ್ದ ಸರ್ವ ಧರ್ಮ ಅರಿವು ಕಾರ್ಯಕ್ರಮವನ್ನು ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪ೦ಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳು ಉದ್ಘಾಟಿಸಿ ಆಶೀರ್ವಚನವನ್ನು ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಧರ್ಮಗಳನ್ನು ಅರ್ಥ ಮಾಡಿಕೊಳ್ಳುವುದು ನಾಲ್ಕು ಅ೦ಧರು ಆನೆಯ ಯಾವುದೋ ಒ೦ದು ಭಾಗವನ್ನು  ಸ್ಪರ್ಶಿಸಿ ಅನುಭವ ಪಡೆದುಕೊ೦ಡ೦ತೆ. ಪ್ರತಿಯೊ೦ದು ಧರ್ಮವು ತನ್ನದೇ ಆತ ತತ್ವವನ್ನು ಹೊ೦ದಿದೆ. ಆದರೆ ನಿಜವಾದ ಅರ್ಥಗ್ರಹಣ, ಎಲ್ಲಾ ದೃಷ್ಟಿಕೋನಗಳತ್ತ ತೆರೆದಾಗ ಮಾತ್ರ ಸಾಧ್ಯ. ಅಹಿ೦ಸೆ, ಸಹಾನುಭೂತಿ, ಸಹಿಷ್ಣುತೆ ಮತ್ತು ಸತ್ಯವೆ೦ಬುದು ಎಲ್ಲಾ ಧರ್ಮಗಳ ಅಧಾರವಾಗಿದೆ” ಎ೦ದರು.

ದಯೆ ಮತ್ತು ಗೌರವದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎ೦ದು ವಿದ್ಯಾರ್ಥಿಗಳಿಗೆ ಹೇಳುತ್ತಾ, “ಇತರರನ್ನು ನೋಯಿಸಬೇಡಿ. ನೀವು ಶಾ೦ತಿ ಮತ್ತು ಏಕತೆಯನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊ೦ದಿದ್ದೀರಿ. ನಿಮ್ಮ ಕ್ರಿಯೆಯು ನಿಮ್ಮ ಜೊತೆಯಲ್ಲಿರುವವರಿಗೆ ಯಾವುದೇ ರೀತಿಯ ಹಾನಿಯನ್ನು ಅಥವಾ ನೋವನ್ನು೦ಟುಮಾಡಬಾರದು. ಸರ್ವೇ ಜನಾ: ಸುಖಿನೋ ಭವ೦ತು ಎ೦ಬ ತತ್ವದ ಮೇಲೆ ಬೆಳೆದು ಬ೦ದ ದೇಶ ನಮ್ಮದು. ಇತ್ತೀಚೆಗಿನ ದಿನಗಳಲ್ಲಿ ಧಾರ್ಮಿಕ ಸಮನ್ವಯತೆಯನ್ನು ಕಾಪಾಡುವುದು ಬಹಳ ಮುಖ್ಯವಾಗಿದೆ. ನಾವು ಎಲ್ಲಾ ಧರ್ಮಗಳನ್ನು ಗೌರವಿಸೋಣ” ಎ೦ದರು.

ಇಸ್ಲಾ೦ ಧರ್ಮದ ಅರಿವನ್ನು ಮೂಡಿಸಲು ಆಗಮಿಸಿದ್ದ  ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ರೆಹಾನಾ ಬೇಗ೦ ಮಾತನಾಡುತ್ತಾ, “ಇಸ್ಲಾಮ್ ಎ೦ದರೆ ಶಾ೦ತಿ. ಕುರಾನ್ ಶಾ೦ತಿಯನ್ನು ಪ್ರತಿಪಾದಿಸುತ್ತದೆ. ನಮ್ಮ ಜೀವನವು ಅಮೂಲ್ಯವಾದದ್ದು. ದ್ವೇಷವು ಶಾ೦ತಿಯನ್ನು ಹಾಳು ಮಾಡುತ್ತದೆ. ನಾವು ನಮ್ಮ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವತ್ತ ಪ್ರಯತ್ನಿಸಬೇಕು ಹಾಗೂ ಪ್ರೀತಿ ಎಲ್ಲಾ ಧರ್ಮಗಳ ಮೂಲ ತತ್ವವಾಗಿ ಉಳಿಯಬೇಕು. ಜಾತಿ ಧರ್ಮಗಳನ್ನು ಪರಿಗಣಿಸದೇ ವಿಷಸರ್ಪದ ಕಡಿತಕ್ಕೆ ಒಳಗಾದ ಸಾವಿರಾರು ಜನರ ಪ್ರಾಣವನ್ನು ಉಳಿಸುವ ಅವಕಾಶ ಆ ಭಗವ೦ತ ನನಗೆ ಒದಗಿಸಿಕೊಟ್ಟಿದ್ದಾನೆ. ನಾವ್ಯಾರೂ ದೇವರನ್ನು ನೋಡಿಲ್ಲ. ಆದರೆ ಪ್ರೀತಿ ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆ” ಎ೦ದರು.

ಕ್ರೈಸ್ತ ಧರ್ಮದ ಅರಿವನ್ನು ಮೂಡಿಸಲು ಆಗಮಿಸಿದ್ದ ಬಿ.ಇ.ಸಿ/ಎಸ್.ಸಿ.ಸಿ ಯ ನಿರ್ದೇಶಕರಾದ ವ೦ದನೀಯ ಗುರು ಸುನಿಲ್ ಜಾರ್ಜ್ ಡಿ’ಸೋಜಾ ಮಾತನಾಡುತ್ತಾ, “ಕ್ರೈಸ್ತ ಧರ್ಮವು ನಾವೆಲ್ಲರೂ ದೇವರ ಮಕ್ಕಳು ಎ೦ದು ಬೋಧಿಸುತ್ತದೆ. ಈ ತತ್ವದ ಆಧಾರದಲ್ಲಿ ನಾವೆಲ್ಲರೂ ಒ೦ದೇ ಕುಟು೦ಬಕ್ಕೆ ಸೇರುತ್ತೇವೆ. ಯೇಸು ಕೇವಲ ತನ್ನ ಧಾರ್ಮಿಕ ಹಿನ್ನಲೆಯನ್ನು ಹ೦ಚಿಕೊಳ್ಳುವವರ ಜೊತೆ ಮಾತ್ರವೇ ತನ್ನ ಪ್ರೀತಿಯನ್ನು ಹ೦ಚಿಕೊ೦ಡಿಲ್ಲ. ನಿಜವಾದ ಪ್ರೀತಿ ಮತ್ತು ಸಹಾನುಭೂತಿ ಧಾರ್ಮಿಕ ಮತ್ತು ಸಮಾಜಿಕ ಮೇರೆಗಳನ್ನು ಮೀರಿ ಹೋಗುತ್ತದೆ.” ಎ೦ದು ಹೇಳಿದರು.

“ಇ೦ದಿನ ಧಾರ್ಮಿಕ ಅಸಹಿಷ್ಣುತೆ ಮತ್ತು ತಾರತಮ್ಯವನ್ನು ಪರಿಗಣಿಸಿದಾಗ ಪ್ರೀತಿ ಮತ್ತು ಸಹಾನುಭೂತಿ ಮತ್ತು ಪರಸ್ಪರ ಅರ್ಥ ಮಾಡಿಕೊಳ್ಳುವಿಕೆ ಆಯ್ಕೆಯಲ್ಲ, ಜವಾಬ್ದಾರಿಯಾಗಿದೆ. ಸಹೋದರತ್ವವು ಕೇವಲ ಮಾತಿಗಷ್ಟೇ ಸೀಮಿತವಾಗಬಾರದು. ಅದು ಕ್ರಿಯೆಯಾಗಿ ಮೂಡಿಬರಬೇಕು” ಎ೦ದರು.

ಹಿ೦ದೂ ಧರ್ಮ ಅರಿವನ್ನು ಮೂಡಿಸಲು  ಆಗಮಿಸಿದ ಸ೦ಸ್ಕೃತಿ ಚಿ೦ತಕರಾದ ಪುತ್ತಿಗೆ ಬಾಲಕೃಷ್ಣ ಭಟ್ ಮಾತನಾಡುತ್ತಾ, “ಯಾವುದನ್ನು ಧರಿಸುತ್ತೇವೆ ಮತ್ತು ಪೋಷಿಸುತ್ತೇವೆಯೋ ಅದು ಧರ್ಮ. ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ. ಅದೊ೦ದು ಜಾಗತಿಕ ನೈತಿಕತೆಯಾಗಿ ಪರಿವರ್ತಿಸಬಹುದು. ಮತ್ತು ವಿಶ್ವದಾದ್ಯ೦ತೆ ಎಲ್ಲರಿಗೂ ಅನ್ವಯವಾಗುತ್ತದೆ” ಎ೦ದರು.

“ಧರ್ಮವನ್ನು ಅರಿಯಲು ವೇದೋಪನಿಷತ್ತುಗಳಿವೆ, ತದನ೦ತರ ಸ೦ಸ್ಕೃತಿಗಳಿವೆ. ಇವುಗಳನ್ನು ಅಧ್ಯಯನ ಮಾಡಿದ ಮೇಲೆಯೂ ಅರ್ಥ ಮಾಡಿಕೊಳ್ಳುವುದು ಕಷ್ಟವೆನಿಸಿದರೆ ಮಹಾನ್ ವ್ಯಕ್ತಿಗಳ ಜೀವನವನ್ನು ಗಮನಿಸಿ ಅವರನ್ನು ಅನುಸರಿಸಬಹುದು. ಅದೂ ಕೂಡ ಕಷ್ಟವೆನಿಸಿದರೆ ಅ೦ತರಾತ್ಮದ ನಿರ್ದೇಶನದ೦ತೆ ನಡೆದುಕೊಳ್ಳಬಹುದು ಎ೦ದರು. ಎಲ್ಲಾ ಧರ್ಮಗಳ ಅ೦ತಿಮ ಗುರಿ ಆತ್ಮ ಸಾಕ್ಷಾತ್ಕಾರ. ಧರ್ಮ, ಅರ್ಥ, ಕಾಮವನ್ನು ಪೂರೈಸಿ ಎಲ್ಲಾ ಭೌತಿಕ ಗುರುತುಗಳಿ೦ದ ಕಳಚಿಕೊಳ್ಳುವುದೇ ಮೋಕ್ಷ” ಎ೦ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡಿ ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸಿ ಎ೦ದು ಹೇಳಿಕೊಡುವುದೇ ಧರ್ಮ. ನಾವೆಲ್ಲರೂ ಬದುಕು ಮತ್ತು ಬದುಕಲು ಬಿಡು ಎ೦ಬ ತತ್ವದಲ್ಲಿ ಬದುಕಬೇಕಾಗಿದೆ. ಎಲ್ಲಾ ಧರ್ಮದ ಸಾರ ಮನುಷ್ಯ ಧರ್ಮವೇ ಆಗಿದೆ. ಎಲ್ಲರೂ ಸಮಾನತೆಯಿ೦ದ, ಶಾ೦ತಿ ಸಹಬಾಳ್ವೆಯಿ೦ದ ಒಟ್ಟಾಗಿ ಬಾಳಿ ಬದುಕಿ ಭವ್ಯ ಭಾರತ ಧರ್ಮವನ್ನು ರಕ್ಷಿಸೋಣ ಎ೦ದರು.

ಸ೦ಸ್ಥೆಯ ಆಡಳಿತ ನಿರ್ದೇಶಕ ಡಾ ಸ೦ಪತ್ ಕುಮಾರ್ ಉಜಿರೆ, ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಆ೦ಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್, ಸಿಬಿಎಸ್ಸಿ ಶಾಲೆಯ ಪ್ರಾ೦ಶುಪಾಲ ಸುರೇಶ್ ಉಪಸ್ಥಿತರಿದ್ದರು. ಎಕ್ಸಲೆ೦ಟ್ ಶಿಕ್ಷಣ ಸ೦ಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಹರೀಶ್ ಎ೦ ವ೦ದಿಸಿದರು. ಡಾ ವಾದಿರಾಜ ಕಾರ್ಯಕ್ರಮ ನಿರೂಪಿಸಿದರು. 

p>

LEAVE A REPLY

Please enter your comment!
Please enter your name here