ಉಜಿರೆ: ಎಸ್. ಡಿ. ಎಂ. ಬಿ.ಎಡ್. ಕಾಲೇಜಿನಲ್ಲಿ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ

0

ಉಜಿರೆ: ಗಾಂಧೀಜಿಯವರು ದೈಹಿಕ ಶಕ್ತಿಗಿಂತ ಮಿಗಿಲಾಗಿ ಬೌದ್ಧಿಕ ಶಕ್ತಿಯ ಮೇಲೆ ದೃಢವಾದ ವಿಶ್ವಾಸವನ್ನು ಹೊಂದಿದ್ದರು. ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಎಂಬ ಆದರ್ಶದೊಂದಿಗೆ ಜೀವಿಸಿದ್ದ ಗಾಂಧೀಜಿಯವರು ಸತ್ಯ, ಅಹಿಂಸೆ, ನಿರ್ಭಯತೆ ಎಂಬ ಆದರ್ಶಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ರಾಮಕೃಷ್ಣ ಭಟ್ ಚೊಕ್ಕಾಡಿ, ನಿವೃತ್ತ ಮುಖ್ಯೋಪಾಧ್ಯಾಯರು, ಶ್ರೀ ಧ. ಮಂ. ಅನುದಾನಿತ ಪ್ರೌಢಶಾಲೆ ಬೆಳಾಲ್ ಇವರು ಹೇಳಿದರು.

ಅವರು ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯ ಉಜಿರೆಯಲ್ಲಿ ಹಮ್ಮಿಕೊಂಡ “ಗಾಂಧೀಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಜೀವನದಲ್ಲಿ ನಾವು ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬುದನ್ನು ತಿಳಿದುಕೊಂಡರೆ ಅವರ ಆದರ್ಶಗಳನ್ನು ಪಾಲಿಸಿದಂತಾಗುತ್ತದೆ. ಗಾಂಧೀಜಿಯವರ ಸರಳತೆ ಎಂದರೆ ನಿಸರ್ಗಕ್ಕೆ ಸಮೀಪವಾಗಿ ಬದುಕುವುದೇ ಆಗಿರುತ್ತದೆ. ಶಿಕ್ಷಣ ಎಂದರೆ ನಮ್ಮ ಆತ್ಮಸ್ಥೈರ್ಯವನ್ನು ಜಾಗೃತಗೊಳಿಸುವ ಕಾರ್ಯ ಮಾಡಬೇಕು ಎಂಬ ವಿಚಾರದಲ್ಲಿ ನಂಬಿಕೆ ಇಟ್ಟಿದ್ದರು. ಶಿಕ್ಷಣ ಎನ್ನುವುದು ತರಗತಿಗೆ ಸೀಮಿತವಾಗಿರಬಾರದು, ಪ್ರಾಯೋಗಿಕ ಹಾಗೂ ಜೀವನ ಶಿಕ್ಷಣವನ್ನು ಬೋಧಿಸುವ ಮೂಲಕ ಅದರ ನೈಜ ಅರ್ಥವನ್ನು ಕಲ್ಪಿಸಬೇಕು ಎಂದು ಹೇಳಿದರು.

ಅಧ್ಯಕ್ಷೀಯ ಮಾತುಗಳಾನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸಲ್ಡಾನ ರವರು ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರು ಅಹಿಂಸಾ ಮಾರ್ಗವನ್ನು ಅಳವಡಿಸಿಕೊಂಡು ವಿಶ್ವಕ್ಕೆ ಮಾದರಿಯಾದರು. ಭಾರತ ಕಂಡಂತಹ ಶ್ರೇಷ್ಠ ಪ್ರಧಾನಿಯಾದ ಶಾಸ್ತ್ರಿಯವರ ಸರಳತೆ, ಸಭ್ಯತೆ, ನಾಯಕತ್ವ, ಸ್ವಾಭಿಮಾನ ಇಂದಿಗೂ ಆದರ್ಶಪ್ರಾಯವಾಗಿದೆ. ಈ ಇಬ್ಬರೂ ವ್ಯಕ್ತಿಗಳ ವ್ಯಕ್ತಿತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಆ ಮಹಾನ್ ಚೇತನರಿಗೆ ನಾವು ಗೌರವ ಸಮರ್ಪಿಸಿದಂತಾಗುತ್ತದೆ.

ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮ ಗಾಂಧಿ ವಿರಚಿತ ಭಕ್ತಿಗೀತೆಯನ್ನು ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಮೋಹನ್ ಕುಮಾರ್ ಸ್ವಾಗತಿಸಿ, ಲಿಖಿತ್ ಎಂ ಎಸ್ ಅತಿಥಿ ಪರಿಚಯ ಮಾಡಿದರು. ನಿಶ್ಮಿತ ಧನ್ಯವಾದವಿತ್ತು, ಹೀನಾ ಕೌಶರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here