ಬಂಗಾಡಿ: ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆಯು ಸೆ.17ರಂದು ಕೊಲ್ಲಿ ಶ್ರೀ ದುರ್ಗಾ ದೇವಿ ಕಲಾ ಮಂದಿರದಲ್ಲಿ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಎಲ್ಲ ಸಮುದಾಯದ ಮತ್ತು ಎಲ್ಲ ವರ್ಗದ ಜನರನ್ನು ಒಟ್ಟುಗೂಡಿಸಿಕೊಂಡು ಹೋಗುವುದು ನನ್ನ ಆಶ್ರಯ ಎಂದರು.
ಸಂಘವು 2023-24ನೇ ಸಾಲಿನಲ್ಲಿ ರೂ.221.11 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ ಮತ್ತು 2023-24ನೇ ಸಾಲಿನಲ್ಲಿ ಸದಸ್ಯರಿಗೆ ರೂ.153.50 ಕೋಟಿ ಸಾಲ ವಿತರಿಸಲಾಗಿದ್ದು, ವರ್ಷಾಂತ್ಯಕ್ಕೆ ರೂ.175.02 ಕೋಟಿ ಹೊರ ಬಾಕಿ ಸಾಲ ಹೊಂದಿದ್ದು ಹಾಗೂ ಸದಸ್ಯರ ಸಹಕಾರದಿಂದ ಸಂಘವು ರೂ.127.16 ಕೋಟಿ ಠೇವಣಿಯನ್ನು ಹೊಂದಿ ವರದಿ ಸಾಲಿನಲ್ಲಿ ಸದಸ್ಯರ ಸಹಕಾರದಿಂದ ಶೇ.99.45 ಸಾಲ ವಸೂಲಾತಿ ಸಾಧ್ಯವಾಗಿದೆಯೆಂದು ಸಭೆಗೆ ತಿಳಿಸಿದರು. ಸಂಘವು ಸಾಲ ನೀಡಿಕೆಯಲ್ಲಿ ಕೃಷಿ ಸಾಲಗಳಿಗೆ ಒತ್ತು ನೀಡುತ್ತಿದ್ದು, ಒಟ್ಟು ಹೊರಬಾಕಿ ಸಾಲದಲ್ಲಿ ರೂ.74.41 ಕೋಟಿ ಕೃಷಿ ಸಾಲ ಹಾಗೂ ಸಂಘದ ಸ್ವಂತ ಬಂಡವಾಳದಿಂದ ರೂ.100.61 ಕೋಟಿ ಕೃಷಿಯೇತರ ಸಾಲ ನೀಡಲಾಗಿದೆ.
ಸಂಘವು ವರದಿ ಸಾಲಿನಲ್ಲಿ ಲೆಕ್ಕ ಪರಿಶೋಧನೆಯಲ್ಲಿ ‘ಎ’ ಶ್ರೇಣಿಯಲ್ಲಿದೆ ಹಾಗೂ ವರ್ಷಾಂತ್ಯಕ್ಕೆ ರೂ.7.05 ಕೋಟಿ ಪಾಲು ಬಂಡವಾಳವನ್ನು ಹೊಂದಿದ್ದು, ರೂ.1020.75 ಕೋಟಿ ವ್ಯವಹಾರವನ್ನು ಮಾಡಿ, ರೂ.4,30,73,720.24 ಲಾಭವನ್ನು ಹೊಂದಲು ಸಾಧ್ಯವಾಗಿದೆ. ಸಂಘವು ಪುತ್ತೂರು ಉಪವಿಭಾಗದಲ್ಲೇ ಅತೀ ಹೆಚ್ಚು ವ್ಯವಹಾರ ಹಾಗೂ ಲಾಭಗಳಿಸಿ ಮುಂಚೂಣಿ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಸಂಘದ ಈ ಪ್ರಗತಿಗಾಗಿ ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು, ಸದಸ್ಯರ ಸಹಕಾರ ಹಾಗೂ ಸಿಬ್ಬಂದಿಗಳ ಪರಿಶ್ರಮವನ್ನು ಅಧ್ಯಕ್ಷರು ಈ ಸಂದರ್ಭದಲ್ಲಿ ಸ್ಮರಿಸಿದರು. ಸಂಘದ ಬೈಲಾ ಪ್ರಕಾರ ಲಾಭವನ್ನು ವಿಂಗಡಿಸಿ ಶೇ.17% ಡಿವಿಡೆಂಡನ್ನು ಘೋಷಿಸಿಸಲಾಯಿತು ಹಾಗೂ ಬಂಗಾಡಿ ಮುಖ್ಯ ಕಛೇರಿಯ ನೂತನ ಕಟ್ಟಡ, ಪೆಟ್ರೋಲ್ ಪಂಪ್ ಮತ್ತು ರೈತರ ಉತ್ಪನ್ನ ಖರೀದಿಗೆ ಮುಂತಾದ ಯೋಜನೆಗಳಿಗೆ ಚಿಂತನೆ ನಡೆಸಲಾಯಿತು. ಮರಣ ಸಾಂತ್ವನ ನಿಧಿಯನ್ನು 10 ಸಾವಿರದಿಂದ 15 ಸಾವಿರಕ್ಕೆ ಏರಿಕೆ ಮಾಡಲಾಯಿತು.
ಕೇಂದ್ರ ಸರಕಾರದ PACS as Msc ಯೋಜನೆಯಡಿ ಕಡಿರುದ್ಯಾವರ ಹಾಗೂ ಕನ್ಯಾಡಿಯ ಪಡ್ಡು ಎಂಬಲ್ಲಿ ಕಟ್ಟಡ ನಿರ್ಮಿಸಲು ರೂ.1.19 ಕೋಟಿಯಂತೆ ಒಟ್ಟು ರೂ.2.37 ಕೋಟಿ ಸಾಲವು ಶೇ 3 ರ ದರದಲ್ಲಿ ನಬಾರ್ಡಿನಿಂದ ಮಂಜೂರಾತಿಯಾಗಿರುತ್ತದೆ. ಈ ಸಾಲ ಯೋಜನೆಯಲ್ಲಿ ಸರಿಯಾದ ಮರುಪಾವತಿಗೆ ಶೇ.2 ಬಡ್ಡಿ ದರವು ಪುನರ್ದನ ಲಭ್ಯವಾಗಲಿರುವುದರಿಂದ ಸಂಘಕ್ಕೆ ಶೇ 1 ಬಡ್ಡಿ ದರದಲ್ಲಿ ಸಾಲವು ಲಭ್ಯವಾಗಲಿದೆ.
ಸಂಘವು ಸದಸ್ಯರಿಗೆ ಗರಿಷ್ಟ ಪ್ರಮಾಣದ ಸೇವೆಯನ್ನು ನೀಡುತ್ತಿದ್ದು ಸಂಘವು ಶಾಖೆಗಳಲ್ಲಿ ರಸಗೊಬ್ಬರ, ಕ್ರಿಮಿನಾಶಕ, ಸಿಮೆಂಟ್, ಕೃಷಿ ಉಪಕರಣ, ಪೈಪ್ ಪಿಟ್ಟಿಂಗ್, ಗ್ರಾಹಕ ವಸ್ತುಗಳನ್ನು ಮಾರಟ ಮಾಡುತ್ತಿದ್ದು ವರದಿ ಸಾಲಿನಲ್ಲಿ ರೂ 9.77 ಕೋಟಿ ಮಾರಟ ವ್ಯವಹಾರವನ್ನು ಮಾಡಿ ರೂ 11,00,938.08 ಮಾರಟ ಲಾಭವನ್ನು ಗಳಿಸಿರುತ್ತದೆ. ಸಂಘವು ಗ್ರಾಹಕರ ಹಾಗೂ ಸದಸ್ಯರ ಸಹಕಾರದಿಂದ ಅಭಿವೃದ್ದಿಯನ್ನು ಹೊಂದಿದ್ದು, ಹೆಚ್ಚಿನ ಸೇವೆಯನ್ನು ನೀಡಲು ಸಂಘಕ್ಕೆ ಠೇವಣಿಯ ಅಗತ್ಯವಿದ್ದು, ಇದಕ್ಕೆ ಸದಸ್ಯರ ಸಹಕಾರವನ್ನು ಕೊರಲಾಯಿತು.
ಸಭೆಯಲ್ಲಿ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 11 ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘದಲ್ಲಿ 382 ನವೋದಯ ಸ್ವ-ಸಹಾಯ ಗುಂಪುಗಳು ಕಾರ್ಯಚರಿಸುತ್ತಿದ್ದು ಇದರಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ 19 ಗುಂಪುಗಳನ್ನು ಗೌರವಿಸಲಾಯಿತು.
2023-24 ಸಾಲಿನಲ್ಲಿ ಸಂಘದ ಕಾರ್ಯ ವ್ಯಾಪ್ತಿಯ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ ಯಲ್ಲಿ 77 ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಗಳಿಸಿ ತೆರ್ಗಡೆಗೊಂಡ 84 ವಿದ್ಯಾರ್ಥಿಗಳಿಗೆ ಒಟ್ಟು 143 ವಿದ್ಯಾರ್ಥಿಗಳಿಗೆ 2500.00 ರೂ ನಂತೆ ಸಂಘದ ವಿಧ್ಯಾನಿಧಿಯಿಂದ ರೂ:3,57500.00 ವಿಧ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಸಂತ ಗೌಡ, ನಿರ್ದೇಶಕರಾದ ಎನ್.ಲಕ್ಷ್ಮಣ ಗೌಡ, ಎಬಿ ಉಮೇಶ್, ತನುಜಾ ಶೇಖರ್, ಆನಂದ ಗೌಡ ಬಿ, ರಮೇಶ್ ಕೆಂಗಾಜೆ, ವಿನಯ ಚಂದ್ರ, ಶ್ರೀಮತಿ ವಿಜಯ, ರಘುನಾಥ, ಸತೀಶ ನಾಯ್ಕ, ಭವ್ಯ, ವೃತ್ತಿಪರ ನಿರ್ದೇಶಕರಾದ ಪುಷ್ಪಾಲಾತ.ಕೆ, ಕೇಶವ ಎಂ.ಕೆ, ಡಿ.ಸಿ.ಸಿ ಬ್ಯಾಂಕಿನ ಪ್ರತಿನಿಧಿ ಸುದರ್ಶನ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿ ಅನಿತಾ, ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಸ್ವಾಗತಿಸಿ, ಸಂಘದ ಸಿಬ್ಬಂದಿ ರಮಾನಂದ.ಕೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ವರ್ಗದವರು ಸಹಕರಿಸಿದರು.