ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕ ದಿನಾಚರಣೆ- ಶಿಕ್ಷಕ ಸುಪ್ತ ಶಕ್ತಿಯ ಪ್ರಕಾಶಕ: ಪ್ರತಾಪಸಿಂಹ ನಾಯಕ್

0

ಕಲ್ಲಬೆಟ್ಟು: ಕನಸು ಕಾಣುವ ಹದಿಹರೆಯದಲ್ಲಿ ಗುರುವಿನ ಪಥದರ್ಶನದಿಂದ ಭವ್ಯ ಭವಿಷ್ಯವನ್ನು ಕಟ್ಟಿಕೊಳ್ಳಬಹುದು. ಯೌವನ ಬರುವುದು ಅಂದ ಚಂದಕ್ಕಲ್ಲ ಬದಲಾಗಿ ಅಸಾಧ್ಯವಾಗಿದ್ದನ್ನು ಸಾಧಿಸಲು. ಮನಸ್ಸಿನ ಕ್ಷಮತೆ ಬಲು ದೊಡ್ಡದು. ನನ್ನಿಂದ ಸಾಧ್ಯ ಎಂಬ ಸಕಾರಾತ್ಮಕ ಚಿಂತನೆ ಅನೂಹ್ಯವಾದ ಕಾರ್ಯವನ್ನು ಮಾಡಿಸುತ್ತದೆ. ವಿದ್ಯಾರ್ಥಿಯ ಭವಿಷ್ಯದ ಕಾಳಜಿಯಿಂದ ಸುಪ್ತವಾಗಿರುವ ಶಕ್ತಿಯನ್ನು ಬೆಳಕಿಗೆ ತರುವುದು ಶಿಕ್ಷಕನ ಧರ್ಮ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.

ಅವರು ಮೂಡುಬಿದಿರೆ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಯು ಜಿಜ್ಞಾಸುವಾಗಿ ಗುರುವಿನಲ್ಲಿ ಶ್ರದ್ಧೆಯಿಟ್ಟು ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮ, ಅಧಿಕ ಉತ್ಸಾಹದಿಂದ ಅಧ್ಯಯನ ಮಾಡಿದಾಗ ಕನಸು ಸಾಕಾರಗೊಳ್ಳುತ್ತದೆ. ವಿದ್ಯಾರ್ಥಿಯ ಸಾಧನೆ, ವೃತ್ತಿ ಜೀವನದ ಯಶಸ್ಸು ಶಿಕ್ಷಕರಿಗೆ ಸಿಗುವ ನೈಜ ಸಮ್ಮಾನ. ಶಿಕ್ಷಕ ವೃತ್ತಿಯ ಅನುಭವದಿಂದಲೇ ಎಕ್ಸಲೆಂಟ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಯುವರಾಜ ದಂಪತಿಗಳು ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಶಿಕ್ಷಕರಿಗೆಲ್ಲ ಪ್ರೇರಣೆ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ ನಿಶ್ಚಿತ ಗುರಿಯೆಡೆಗೆ ಸಾಗುವಲ್ಲಿ ಗುರುವಿನ ಪಾತ್ರ ಮಹತ್ತರವಾದದ್ದು. ಗುರುವಿನಿಂದ ಪಡೆಯುವ ಜ್ಞಾನದ ಜೊತೆಗೆ ಉತ್ತಮ ಮನೋಭಾವವನ್ನು ಹೊಂದಿ ಕೌಶಲವನ್ನು ಬೆಳೆಸಿಕೊಂಡರೆ ಅವಕಾಶದ ಹೆಬ್ಬಾಗಿಲು ತೆರೆಯುತ್ತದೆ. ನಮ್ಮ ಬದುಕಿನ ಶಿಲ್ಪಿಗಳಾದ ಶಿಕ್ಷಕರು, ಸಮಾಜದ ಗುರು ಶಕ್ತಿಯಾಗಿದ್ದಾರೆ. ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಶಿಕ್ಷಕರ ಅಗೋಚರವಾದ ತಾಳ್ಮೆ ತ್ಯಾಗ ಸ್ಮರಣೀಯವಾದದ್ದು. ಶಿಕ್ಷಣದ ಎಲ್ಲಾ ಹಂತಗಳಲ್ಲಿ ಜ್ಞಾನದ ಹಸಿವನ್ನು ನೀಗಿಸಿ ಬದುಕನ್ನು ಕಟ್ಟಿಕೊಟ್ಟ ಶಿಕ್ಷಕರ ನೆನಪು ಹಚ್ಚ ಹಸಿರಾಗಿರಬೇಕು. ಋಣಮುಕ್ತರಾಗಲು ಸಮಾಜಕ್ಕೆ ಕೊಡುಗೆ ಸಲ್ಲಿಸಬೇಕು ಎಂದು ಅಧ್ಯಕ್ಷ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ ಶಿಕ್ಷಕ ಮಹನೀಯರಾದ, ಪ್ರೊ ವಿಶ್ವನಾಥ ಪಿ, ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥರು, ಎಸ್ ಡಿ ಎಮ್ ಕಾಲೇಜು, ಪ್ರೊ.ಬಿ ನಾಗೇಶ್ ನಾಯಕ್, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರು, ಎಸ್ ಡಿ ಎಂ ಕಾಲೇಜು, ಕೆ ವಸಂತರಾಜ್ ಜೈನ್, ನಿವೃತ್ತ ಶಿಕ್ಷಕರು, ಪ್ರೊ.ಶಾಂತಿಪ್ರಕಾಶ್ ಕುಲಸಚಿವರು, ಪರೀಕ್ಷಾಂಗ ವಿಭಾಗ, ಎಸ್ ಡಿ ಎಂ ಕಾಲೇಜು, ಶಾಲಿನಿ ನಿವೃತ್ತ ಶಿಕ್ಷಕಿ, ತಾಕೊಡೆ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್  ಗುರುವಂದನಾ ಭಾಷಣ ಮಾಡಿದರು.

ಕಳೆದ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಅತ್ಯುತ್ತಮ ರೀತಿಯಲ್ಲಿ ಅಣಿಗೊಳಿಸಿ ಉತ್ತಮ ಫಲಿತಾಂಶಕ್ಕೆ ಕಾರಣರಾದ ವಿವಿಧ ವಿಭಾಗಗಳ ಅಧ್ಯಾಪಕರನ್ನು ಆಡಳಿತ ಮಂಡಳಿಯು ಗೌರವಧನದೊಂದಿಗೆ ಪ್ರೋತ್ಸಾಹಿಸಿತು. ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಬಿಪಿ ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕ ಪ್ರೊ.ಪುಷ್ಪರಾಜ್, ಎಕ್ಸಲೆಂಟ್ ಸಿಬಿಎಸ್ಸಿ ಶಾಲೆಯ ಪ್ರಾಂಶುಪಾಲ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಹರೀಶ್ ಮರವಂತೆ ಸಾಧಕ ಶಿಕ್ಷಕರನ್ನು ಪರಿಚಯಿಸಿದರು. ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ವಂದಿಸಿದರು. ಅಧ್ಯಾಪಕರಾದ ಯಶಸ್ವಿನೀ, ವೆನೆಸ್ಸಾ ನೊರೋನ್ಹಾ ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here