ಪುಂಜಾಲಕಟ್ಟೆ: ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿಯಲ್ಲಿ “ಸಹಪಠ್ಯ ಚಟುವಟಿಕೆಗಳ ಮೂಲಕ ಜೀವನ ಕೌಶಲ್ಯ ಅಭಿವೃದ್ಧಿ” ಎನ್ನುವ ಧ್ಯೇಯ ವಾಕ್ಯದ ಪರಿಕಲ್ಪನೆಯಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಸೂಚನೆಯಂತೆ ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ವತಿಯಿಂದ ಹಮ್ಮಿಕೊಂಡಿರುವ ಬೆಳ್ತಂಗಡಿ ತಾಲೂಕು ಮಟ್ಟದ ಈ ಸ್ಪರ್ಧೆಯು ವೇಣೂರು ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ನೇತೃತ್ವದಲ್ಲಿ ವೇಣೂರು ಪ್ರೌಢಶಾಲಾ ಸಭಾಂಗಣದಲ್ಲಿ ಆಗಸ್ಟ್ 30ರಂದು ನಡೆಯಿತು.
ಈ ಸ್ಪರ್ಧೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ತಂಡ ರಾಷ್ಟ್ರೀಯ ಜನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅದೇ ರೀತಿ ಪಾತ್ರಾಭಿನಯ ಸ್ಪರ್ಧಿಯಲ್ಲಿ ಭಾಗವಹಿಸಿದ ತಂಡ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.ಈ ವಿಜೇತ ತಂಡಕ್ಕೆ ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಭಾರ ಸಮನ್ವಯಾಧಿಕಾರಿ ಮೋಹನ್ ಕುಮಾರ್ ಅವರು ಪ್ರಮಾಣ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯ ಸ್ಪರ್ಧೆಯ ತಾಲೂಕು ನೋಡಲ ಅಧಿಕಾರಿ ಮತ್ತು ಶಿಕ್ಷಣ ಸಂಯೋಜಕರು ಆಗಿರುವ ಸಿದ್ದಲಿಂಗಯ್ಯ ಹಾಗೂ ಚೇತನಾಕ್ಷಿ, ಪುಂಜಾಲಕಟ್ಟೆಯ ಸಹ ಶಿಕ್ಷಕ ಧರಣೇಂದ್ರ ಕೆ, ಚಿತ್ರಕಲಾ ಶಿಕ್ಷಕ ಬಿ.ಎಸ್ ಬಿರಾದಾರ್, ಅತಿಥಿ ಶಿಕ್ಷಕಿ ಜಯಶ್ರೀ, ವೇಣೂರು ಶಾಲಾ ಶಿಕ್ಷಕ ಬಳಗ ಮತ್ತು ಗಣ್ಯರು ಉಪಸ್ಥಿತರಿದ್ದರು.