ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಡಂಬಳ್ಳಿ ಎಂಬಲ್ಲಿ ಎಚ್ ಟಿ ಲೈನ್ ವಿದ್ಯುತ್ ತಂತಿ ಕಡಿದು ಬಿದ್ದು ಮೆಸ್ಕಾಂನ ಸಕಾಲಿಕ ಸ್ಪಂದನೆಯಿಂದ ಸಂಭವನೀಯ ಅನಾಹುತ ತಪ್ಪಿದೆ. ಕಡಂಬಳ್ಳಿಯ ತಂಬೂರಿ ಪದ್ಮನಾಭ ಪಟವರ್ಧನ್ ಎಂಬವರ ರಬ್ಬರ್ ತೋಟದಲ್ಲಿ ಹಾದು ಹೋಗಿರುವ ಎಚ್ ಟಿ ಲೈನ್ ವಿದ್ಯುತ್ ತಂತಿ ಸೋಮವಾರ ಮುಂಜಾನೆ 4ರ ಸುಮಾರಿಗೆ ಕಡಿದು ಬಿದ್ದು ತೋಟದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು.
ಮನೆಯವರು ತಕ್ಷಣ ಪರಿಸರದ ಮಂದಿ ಹಾಗೂ ಮೆಸ್ಕಾಂ ಜೆಇಯವರಿಗೆ ಫೋನ್ ಮೂಲಕ ವಿಚಾರ ತಿಳಿಸಿದ್ದಾರೆ ಕೂಡಲೇ ಕಕ್ಕಿಂಜೆ ಸಬ್ ಸ್ಟೇಷನ್ ನಿಂದ ವಿದ್ಯುತ್ ಲೈನ್ ಆಫ್ ಮಾಡಿದ ಕಾರಣ ಹಾಗೂ ಮಳೆ ಇದ್ದುದರಿಂದ ಬೆಂಕಿ ಹತೋಟಿಗೆ ಬಂತು. ಇಲ್ಲದಿದ್ದರೆ ಬೆಂಕಿ ರಬ್ಬರ್ ತೋಟವನ್ನು ಆವರಿಸುವ ಹಾಗೂ ಸಮೀಪದ ಮನೆಗಳ ತನಕ ಪಸರಿಸುವ ಸಾಧ್ಯತೆ ಇತ್ತು. ಈ ಪ್ರದೇಶದಲ್ಲಿ ಹಗಲು ಹೊತ್ತು ಜನರು ತಿರುಗಾಟ ನಡೆಸುವ ಪ್ರದೇಶ ಇದಾಗಿದ್ದು ಹಗಲು ಹೊತ್ತು ತಂತಿ ಕಡಿದು ಬೀಳುತ್ತಿದ್ದರೆ ಹೆಚ್ಚಿನ ಅನಾಹುತ ಉಂಟಾಗುವ ಸಾಧ್ಯತೆ ಇತ್ತು. ತಂತಿ ತುಂಡಾಗಿ ಬಿದ್ದ ಕಾರಣ ಪರಿಸರದ ನೂರಾರು ಮನೆಗಳಿಗೆ ಮಧ್ಯಾಹ್ನದವರೆಗೂ ವಿದ್ಯುತ್ ವ್ಯತ್ಯಯ ಉಂಟಾಯಿತು.
ಹಳೆತಂತಿ: ಕಡಂಬಳ್ಳಿ ಮತ್ತು ಕುಡೆಂಚಿ ಪರಿಸರದಲ್ಲಿ ಹಳೆ ತಂತಿಗಳಿದ್ದು ಇವುಗಳನ್ನು ಬದಲಾಯಿಸಲಾಗಿಲ್ಲ. ತಂತಿ ಬದಲಾವಣೆ ಬಗ್ಗೆ ಸಾಕಷ್ಟು ಬಾರಿ ಮೆಸ್ಕಾಂ ನ ಗಮನಕ್ಕೆ ತರಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.ಈ ಪ್ರದೇಶದಲ್ಲಿ ಹಳೆ ತಂತಿಗಳಿದ್ದು ಅವೆಲ್ಲವೂ ತಮ್ಮ ಸಾಮರ್ಥ್ಯ ಕಳೆದುಕೊಂಡಿರುವುದರಿಂದ ಅಪಾಯಕಾರಿಯಾಗಿವೆ ಎಂದು ತಿಳಿಸಿದ್ದಾರೆ.