ಉಜಿರೆ: ವಿಶ್ವಹಿಂದೂ ಪರಿಷದ್ ಸ್ಥಾಪನೆಗೊಂಡು 60 ವರ್ಷ ಪೂರೈಸಿದ ಅಂಗವಾಗಿ ಷಷ್ಠಿಪೂರ್ತಿ ಸಮಾರೋಪ ಸಮಾರಂಭದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ವತಿಯಿಂದ ಸೆ.1ರಂದು ಉಜಿರೆಯಲ್ಲಿ ಬೃಹತ್ ಹಿಂದೂ ಸಮಾವೇಶ ಬೃಹತ್ ಶೋಭಾಯಾತ್ರೆ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷದ್ ದಕ್ಷಿಣ ಪ್ರಾಂತ ಕಾರ್ಯದರ್ಶಿ ಶರಣ್ ಪಂಪುವೆಲ್ ಹೇಳಿದರು. ಅವರು ಆ.22ರಂದು ಉಜಿರೆ ಶಾರದಾ ಮಂಟಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಗತ್ತಿನ ಅತೀ ದೊಡ್ಡ ಹಿಂದೂ ಸಂಘಟನೆ ವಿಶ್ವ ಹಿಂದೂ ಪರಿಷದ್ ಮುಂಬೈಯಲ್ಲಿ 1964ರಲ್ಲಿ ಸ್ಥಾಪನೆಗೊಂಡಿತು.ಭಾರತ ಮಾತ್ರ ವಲ್ಲದೆ ಜಗತ್ತಿನ 30 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ದೇಶದ 90 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಮಿತಿ ಹೊಂದಿ ದೇಶದಾದ್ಯಂತ ಹಿಂದೂ ಸೇವಾ ಸುರಕ್ಷಾ ಸಂಘಟನೆ ಮಾಡುತ್ತಿದೆ. 60ನೇ ವರ್ಷದ ಕಾರ್ಯಕ್ರಮದ ಅಂಗವಾಗಿ ದೇಶದ ಎಲ್ಲಾ ಪ್ರಖಂಡಗಳಲ್ಲಿ ಸಮ್ಮೇಳನ ನಡೆಯಲಿದೆ.
ಕರ್ನಾಟಕ ದಕ್ಷಿಣ ಪ್ರಾಂತ್ಯದಲ್ಲಿ 250 ಕಡೆ ದ.ಕ., ಉಡುಪಿ ಜಿಲ್ಲೆಯಲ್ಲಿ 30 ಕಡೆ ಕಾರ್ಯಕ್ರಮ ನಡೆಯಲಿದೆ.ಇದಕ್ಕಾಗಿ ಉತ್ಸವ ಸಮಿತಿ ರಚಿಸಲಾಗಿದ್ದು ಬೃಹತ್ ಹಿಂದೂ ಸಮಿತಿ ಶೋಭ ಯಾತ್ರೆಗಳು ಜರಗಲಿದೆ.ಉಜಿರೆಯಲ್ಲಿ ಸಾಧು ಸಂತರು, ಧಾರ್ಮಿಕ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಲಿದ್ದು ಹಿಂದೂಗಳ ಮೇಲೆ ಆಗುತ್ತಿರುವ ದಬ್ಬಾಳಿಕೆ ವಿರುದ್ಧ ಸಂಘಟನಾತ್ಮಕವಾಗಿ ಸಮ್ಮೇಳನ ಮೂಲಕ ಹೋರಾಟ ಮಾಡಲಾಗುವುದು ಎಂದರು.ಇತ್ತೀಚೆಗೆ ಕಾಂಗ್ರೆಸ್ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜ ಹೇಳಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಅವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸುತ್ತೇನೆ ಎಂದರು.
ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಉಜಿರೆಯಲ್ಲಿ ನಡೆಯುವ ಕಾರ್ಯಕ್ರಮದ ವಿವರ ನೀಡಿ ಉಜಿರೆ ಎಸ್.ಡಿ.ಎಂ ಮೈದಾನದಿಂದ ಶೋಭಾ ಯಾತ್ರೆ ನಡೆಯಲಿದ್ದು ಹಿಂದೂ ಸಂಘಟನೆಗೆ ದುಡಿದ 60 ಮಂದಿಗೆ ಸನ್ಮಾನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಜರಂಗದಳ ಮಂಗಳೂರು ವಿಭಾಗದ ಸಂಚಾಲಕ ಪುನೀತ್ ಅತ್ತಾವರ, ವಿಶ್ವಹಿಂದೂ ಪರಿಷತ್ ಬೆಳ್ತಂಗಡಿ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಉತ್ಸವ ಸಮಿತಿಯ ಸಂಚಾಲಕ ಸಂಪತ್ ಬಿ.ಸುವರ್ಣ, ಅಧ್ಯಕ್ಷ ಡಾ.ಎಂ.ಎಂ.ದಯಾಕರ್, ಕೋಶಧಿಕಾರಿ ಪದ್ಮನಾಭ ಶೆಟ್ಟಿಗಾರ್ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.