ರಬ್ಬರ್ ಕೃಷಿಕರು ಆತ್ಮವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ: ಶ್ರೀಧರ ಜಿ.ಭಿಡೆ ಪತ್ರಿಕಾಗೋಷ್ಠಿ

0

ಉಜಿರೆ: ಪ್ರಸಕ್ತ ವರ್ಷ ರಬ್ಬರ್ ಬೆಳೆಗೆ ಬೆಲೆ ಏರಿಳಿತ ಕಂಡ ವರ್ಷವಾಗಿದ್ದು, ರಬ್ಬರ್ ಬೆಳೆಗಾರರು ಭರವಸೆ ಆತ್ಮವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ, ರಬ್ಬರ್ ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘದ ವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಬೆಳ್ತಂಗಡಿ ತಾಲೂಕು ರಬ್ಬರ್ ಉಜಿರೆ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.

ಅವರು ಆ.22ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.”ಕೃಷಿಕರ ಭವಿಷ್ಯದ ದೃಷ್ಟಿಯಲ್ಲಿ ಬೆಂಗಳೂರಿನ ಬ್ಯಾಂಬೂ ಸೊಸೈಟಿಯೊಂದಿಗೆ ಸೇರಿ ಬಿದಿರು ಕೃಷಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘದ ಮೂಲಕ 5000 ಗಿಡಗಳನ್ನು ರೈತರಿಗೆ ವಿತರಿಸಲಾಗಿದೆ. ಆರು ವರ್ಷ ಅವಧಿಯ ಈ ಕೃಷಿಗೆ ಬ್ಯಾಂಬೂ ಸೊಸೈಟಿಯಿಂದ ಮೊದಲ ವರ್ಷ ಪ್ರತಿ ಗಿಡಕ್ಕೆ 100ರೂ., ಎರಡನೇ ಮತ್ತು ಮೂರನೇ ವರ್ಷ ತಲಾ 50ರೂ. ಧನಸಹಾಯ ಸಿಗಲಿದೆ” ಎಂದು ಹೇಳಿದರು.

“ಸಂಘದ ಸದಸ್ಯರಿಗೆ ಪ್ರತಿ ಕೆಜಿ ರಬ್ಬರ್ ಗೆ 2.50ರೂ. ಹೆಚ್ಚುವರಿ ದರ ನೀಡಲಾಗಿದೆ.ಇದು ಸಂಘಕ್ಕೆ ನಿರಂತರ ರಬ್ಬರ್ ಪೂರೈಸುವ ಹಾಗೂ ರಬ್ಬರ್ ಸೊಸೈಟಿಯಿಂದ ಸಾಮಾಗ್ರಿ ಖರೀದಿಸುವ ಸದಸ್ಯರಿಗೆ ಅನ್ವಯವಾಗುತ್ತದೆ. ರಬ್ಬರ್ ಸೊಸೈಟಿಯಲ್ಲಿ ರಬ್ಬರ್ ದಾಸ್ತಾನು ಇಡುವ ಯೋಜನೆ ಇದ್ದು ಈ ವರ್ಷ ಬೆಲೆ ಏರಿಕೆಯಿಂದ ಸದಸ್ಯರಿಗೆ ಸುಮಾರು 6.30 ಕೋಟಿ ರೂ. ಲಾಭ ದೊರಕಿದೆ” ಎಂದರು.

“ಬೆಲೆ ಇಳಿಕೆ ವೇಳೆ ಸರಕಾರಕ್ಕೆ ರಬ್ಬರ್ ಕೃಷಿಕರ ಹಿತದೃಷ್ಟಿಯಲ್ಲಿ ಅನೇಕ ಮನವಿಗಳನ್ನು ನೀಡಲಾಗಿದ್ದರೂ ಇದುವರೆಗೆ ಯಾವುದೇ ಸ್ಪಂದನೆ ದೊರಕಿಲ್ಲ.ಸಂಘವು ವರದಿ ವರ್ಷದಲ್ಲಿ 6,421 ಕೆ.ಜಿ ಕಾಳುಮೆಣಸು ಖರೀದಿ ಮಾಡಿದೆ. ರಸಗೊಬ್ಬರ ಮಾರಾಟ ವಿಭಾಗದಲ್ಲಿ 582 ಟನ್ ರಸಗೊಬ್ಬರ ಮಾರಾಟ ಮಾಡಲಾಗಿದೆ” ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅನಂತ ಭಟ್ ಎಂ., ನಿರ್ದೇಶಕರಾದ ಜಯಶ್ರೀ ಡಿ.ಎಂ., ಆರ್.ಸುಭಾಷಿಣಿ, ಬೈರಪ್ಪ, ಕೆ.ರಾಮ ನಾಯ್ಕ, ಇ.ಸುಂದರ ಗೌಡ, ಪದ್ಮ ಗೌಡ ಎಚ್., ಕೆ.ಜೆ.ಆಗಸ್ಟಿನ್, ವಿ.ವಿ.ಅಬ್ರಹಾಂ, ಬಾಲಕೃಷ್ಣ ಗೌಡ ಕೆ., ಅಬ್ರಹಾಂ ಬಿ.ಎಸ್., ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜು ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here