೨೪ ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಸಿದ್ದರಾಮಯ್ಯ ಪರ- ಮತ ಕೇಳಿದಿರಲ್ವಾ ಸತ್ಯಣ್ಣ…. ಹೇಳಿಕೆ ವಿರುದ್ಧದ ಎಫ್.ಐ.ಆರ್. ಮತ್ತು ಕಳೆಂಜ ಕೇಸಿನಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ ವಿಚಾರ

0

ಬೆಳ್ತಂಗಡಿ: ೨೪ ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಸಿದ್ದರಾಮಯ್ಯರವರಿಗೆ ಮತ ಕೇಳಿದ್ದೀರಲ್ವಾ ಸತ್ಯಣ್ಣ ಎಂದು ಭಾಷಣದಲ್ಲಿ ಪ್ರಶ್ನೆ ಮಾಡಿದ ಆರೋಪದಡಿ ಕಾಂಗ್ರೆಸ್ ಮುಂದಾಳು ನಮಿತಾ ಪೂಜಾರಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್.ಐ.ಆರ್. ಮತ್ತು ಕಳೆಂಜದಲ್ಲಿ ಲೋಲಾಕ್ಷ ಎಂಬವರ ಮನೆ ತೆರವು ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ನೀಡಿದ ದೂರಿನಂತೆ ಧರ್ಮಸ್ಥಳ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಬೆಂಗಳೂರಿನಲ್ಲಿರುವ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾರ್ಜ್ ಶೀಟ್ ರದ್ದು ಪಡಿಸಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಎರಡೂ ಪ್ರಕರಣಗಳನ್ನು ವಜಾಗೊಳಿಸಬೇಕು ಎಂದು ಹರೀಶ್ ಪೂಂಜ ಸಲ್ಲಿಸಿರುವ ಪ್ರತ್ಯೇಕ ಅರ್ಜಿಯನ್ನು ನ್ಯಾಯಮೂರ್ತಿಗಳು ಅಂಗೀಕರಿಸಿದ್ದು ವಿಚಾರಣೆ ಮುಂದೂಡಿದ್ದಾರೆ.
ನಮಿತಾ ಪೂಜಾರಿ ನೀಡಿದ್ದ ದೂರಿನ ಪ್ರಕರಣ: ೨೨-೦೫-೨೦೨೩ರಂದು ಬೆಳ್ತಂಗಡಿ ಕಿನ್ಯಮ್ಮ ಸಭಾಭವನದಲ್ಲಿ ಬಿಜೆಪಿ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟಾನ್ ಅವರು ಏರ್ಪಡಿಸಿದ್ದು ಸದ್ರಿ ಸಭೆಯಲ್ಲಿ ಶಾಸಕ ಹರೀಶ್ ಪೂಂಜರವರು ಮಾತನಾಡುತ್ತಾ ಸತ್ಯಣ್ಣ ೨೪ ಮಂದಿ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಸಿದ್ದ ರಾಮಯ್ಯರವರಿಗೆ ಮತ ಕೇಳಿದ್ದೀರಲ್ವಾ. ಹಿಂದೂ ಹುಡುಗಿಯನ್ನು ಪ್ರೀತಿಸಿದ್ದ ಮುಸ್ಲಿಂ ಹುಡುಗನಿಗೆ ಹಿಂದೂ ಹುಡುಗನೊಬ್ಬ ಹಲ್ಲೆ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾಗ ನಾನು ಪೊಲೀಸ್ ಠಾಣೆಗೆ ಹೋಗಿ ಕೇಸ್ ದಾಖಲಾಗದಂತೆ ನೋಡಿಕೊಂಡಿರುವುದಲ್ಲದೆ ಗೋ ಸಾಗಾಟ ಸಂದರ್ಭ ಗೋವುಗಳನ್ನು ಸಾಗಿಸುತ್ತಿದ್ದವರಿಗೆ ಹಿಂದೂ ಯುವಕರು ತಡೆದು ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಹಿಂದೂ ಯುವಕರನ್ನು ಪೊಲೀಸರು ಬಂಧಿಸಿದ್ದಾಗ ತಾನು ಠಾಣೆಗೆ ಹೋಗಿ ಅವರ ಮೇಲೆ ಯಾವುದೇ ಕೇಸ್ ದಾಖಲಾಗದಂತೆ ನೋಡಿಕೊಂಡು ಅವರನ್ನು ಠಾಣೆಯಿಂದ ಬಿಡಿಸಿಕೊಂಡು ಬಂದಿzನೆ ಎಂಬಿತ್ಯಾದಿಯಾಗಿ ಹೇಳಿಕೆ ನೀಡಿ ಒಂದು ಕ್ಷೇತ್ರದ ಶಾಸಕನಾಗಿ ಕೋಮು ಪ್ರಚೋದಕ, ಸಂವಿಧಾನ ಬಾಹಿರ ಹೇಳಿಕೆ ನೀಡಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಮಧ್ಯೆ ದ್ವೇಷ ಉಂಟಾಗಿ ಗಲಭೆಗೆ ಪ್ರಚೋದಿಸಿ ಕ್ಷೇತ್ರಗಳ ಜನರ ಮಧ್ಯೆ ದ್ವೇಷ ಉಂಟಾಗಿ ಗಲಾಟೆ ಮಾಡಿ ಶಾಂತಿ ಕದಡಬೇಕು ಎಂಬ ಉzಶದಿಂದ ಈ ರೀತಿಯ ಭಾಷಣ ಮಾಡಿರುತ್ತಾರೆ ಎಂದು ಕಾಂಗ್ರೆಸ್ ಮುಂದಾಳು ಆಗಿರುವ ತೋಟತ್ತಾಡಿ ಕೇಪುಳಗುಡ್ಡೆಯ ನಮಿತಾ ಪೂಜಾರಿ ೨೦೨೩ರ ಮೇ ೨೪ರಂದು ಅ.ಕ್ರ.೩೯ರಂತೆ ಐಪಿಸಿ ೧೫೩,೧೫೪ ಂ೫೦೫(೧) (ಃ)೫೦೫(೧)(ಅ) ೫೦೫ ರಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷರಾಗಿದ್ದ ಜಯಂತ ಕೋಟ್ಯಾನ್ ವಿರುದ್ಧ ಕೇಸ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ದಾಖಲಿಸಿರುವ ಎಫ್.ಐ.ಆರ್. ರದ್ದು ಪಡಿಸುವಂತೆ ಕೋರಿ ಹರೀಶ್ ಪೂಂಜ ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರಣ್ಯಾಧಿಕಾರಿ ಜಯಪ್ರಕಾಶ್ ನೀಡಿದ್ದ ದೂರಿನ ಪ್ರಕರಣ: ಕಳೆಂಜದಲ್ಲಿ ಲೋಲಾಕ್ಷ ಎಂಬವರು ಅಕ್ರಮವಾಗಿ ನಿರ್ಮಿಸಿದ್ದ ಮನೆಯನ್ನು ತೆರವು ಮಾಡಲು ಮುಂದಾಗಿದ್ದ ವೇಳೆ ತನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ.ರವರು ನೀಡಿದ್ದ ದೂರು ದಾಖಲಿಸಿಕೊಂಡು ತನಿಖೆ ಮುಕ್ತಾಯಗೊಳಿಸಿದ್ದ ಧರ್ಮಸ್ಥಳ ಠಾಣಾ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದೂ ಶಾಸಕ ಹರೀಶ್ ಪೂಂಜ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕಳೆಂಜದಲ್ಲಿ ಲೋಲಾಕ್ಷ ಎಂಬವರು ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ದ ಮನೆಯನ್ನು ತೆರವು ಮಾಡುವ ವೇಳೆ ತನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಿ ಶಾಸಕ ಹರೀಶ್ ಪೂಂಜ ಮತ್ತಿತರರ ವಿರುದ್ಧ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ.ರವರು ನೀಡಿದ್ದ ದೂರಿನ ಆಧಾರದಲ್ಲಿ ಕೇಸು ದಾಖಲಿಸಿದ್ದ ಧರ್ಮಸ್ಥಳ ಠಾಣಾ ಪೊಲೀಸರು ತನಿಖೆ ಪೂರ್ಣಗೊಳಿಸಿ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮತ್ತು ಇತರರನ್ನು ಆರೋಪಿಗಳು ಎಂದು ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯಲ್ಲಿ ತನಿಖಾಧಿಕಾರಿಯವರು ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾ ವ್ಯಾಪ್ತಿಗೆ ಒಳಪಡುವ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೆ ನಂಬ್ರ ೩೦೯ರ ರಸ್ತೆಯಲ್ಲಿ ಲೋಲಾಕ್ಷ ಗೌಡ ಎಂಬವರು ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಈ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಇಲಾಖೆಯ ಸಿಬ್ಬಂದಿಗಳೊಂದಿಗೆ ೨೦೨೩ರ ಅಕ್ಟೋಬರ್ ೯ರಂದು ಬೆಳಿಗ್ಗೆ ೭.೪೫ ಗಂಟೆಗೆ ದೂರುದಾರ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್‌ರವರು ಭೇಟಿ ನೀಡಿದ್ದ ವೇಳೆ ಲೋಲಾಕ್ಷ ಗೌಡರವರು ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಲು ಫೌಂಡೇಶನ್ ಹಾಕಿರುವುದು ಕಂಡು ಬಂದಿದ್ದು ಕೂಡಲೇ ನಿವೇಶನವನ್ನು ತೆರವು ಮಾಡುವಂತೆ ಲೋಲಾಕ್ಷ ಗೌಡ ಅವರಿಗೆ ಸೂಚಿಸಿದ್ದರು. ಅವರು ತೆರವುಗೊಳಿಸದೆ ಇರುವುದರಿಂದ ಫೌಂಡೇಶನನ್ನು ಇತರ ಅರಣ್ಯ ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿಗಳ ಮುಖಾಂತರ ತೆರವುಗೊಳಿಸಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜರವರು ತಮ್ಮ ಬೆಂಬಲಿಗರೊಂದಿಗೆ ಸೇರಿ ಸದ್ರಿ ಫೌಂಡೇಶನ್ ತೆರವುಗೊಳಿಸದಂತೆ ತಡೆದಿದ್ದಾರೆ. ಶಾಸಕ ಹರೀಶ್ ಪೂಂಜರವರು ಅಧಿಕಾರಿಗಳ ಸಮ್ಮುಖದಲ್ಲಿ ದೂರುದಾರರಾದ ವಲಯ ಅರಣ್ಯಾಧಿಕಾರಿಯವರನ್ನು ಉzಶಿಸಿ ಲೋಫರ್ ನನ್ ಮಗ ಎಂಬ ಅಸಂಸದೀಯ ಪದಗಳನ್ನು ಬಳಸಿದ್ದಾರೆ. ಸದ್ರಿ ಕಟ್ಟಡವನ್ನು ತೆರವುಗೊಳಿಸಿದ್ದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಮತ್ತಿತರರ ವಿರುದ್ಧ ಐಪಿಸಿ ೧೪೩, ೩೫೩, ೫೦೪ ಮತ್ತು ೧೪೯ರಡಿ ಪ್ರಕರಣ ದಾಖಲಿಸಲಾಗಿದ್ದು ಪ್ರಕರಣದ ತನಿಖೆ ಪೂರ್ಣಗೊಳಿಸಲಾಗಿದೆ. ದೂರಿನ ವಿಚಾರದಲ್ಲಿ ಸತ್ಯಾಂಶ ಕಂಡು ಬಂದಿದ್ದು ಶಾಸಕ ಹರೀಶ್ ಪೂಂಜ ಮತ್ತಿತರರು ಅಪರಾಧ ಎಸಗಿದ್ದಾರೆ ಎಂದು ತನಿಖಾಧಿಕಾರಿ ಚಾರ್ಚ್‌ಶೀಟ್‌ನಲ್ಲಿ ವಿವರ ನೀಡಿದ್ದರು.
ಕಳೆಂಜದಲ್ಲಿ ಲೋಲಾಕ್ಷ ಎಂಬವರು ಮೀಸಲು ಅರಣ್ಯ ಇಲಾಖೆಯ ಜಾಗದಲ್ಲಿ ನಿರ್ಮಿಸಿದ್ದ ಮನೆಯನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ೨೦೨೩ರ ಅಕ್ಟೋಬರ್ ೭ರಂದು ತೆರವು ಮಾಡಲು ಮುಂದಾದಾಗ ಶಾಸಕ ಹರೀಶ್ ಪೂಂಜ ಮತ್ತಿತರರು ತಡೆ ಹಿಡಿದು ಅದೇ ಸ್ಥಳದಲ್ಲಿ ಮತ್ತೆ ಮನೆ ನಿರ್ಮಾಣ ಮಾಡಿದ್ದರು. ನಂತರ ಅರಣ್ಯ ಇಲಾಖೆಯವರು ಆ ಮನೆಯನ್ನೂ ತೆರವು ಮಾಡಲು ೨೦೨೩ರ ಅಕ್ಟೋಬರ್ ೯ರಂದು ಮುಂದಾದಾಗ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮತ್ತು ಇತರ ಮುಖಂಡರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಡುವೆ ಚಕಮಕಿ ನಡೆದಿತ್ತು. ಈ ವೇಳೆ ಭಾರೀ ಪ್ರತಿಭಟನೆ ನಡೆದಿತ್ತು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಚಕಮಕಿ, ತಳ್ಳಾಟ ಉಂಟಾಗಿತ್ತು. ಗೊಂದಲದ ಪರಿಸ್ಥಿತಿ ಉಂಟಾದ ಬಳಿಕ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಮಾತುಕತೆ ನಡೆದು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಲೋಲಾಕ್ಷರವರು ನಿರ್ಮಿಸಿರುವ ಮನೆ ಅರಣ್ಯ ಜಾಗದಲ್ಲಿ ಇರುವುದೇ ಹೌದಾದರೆ ತಾನೇ ತೆರವು ಮಾಡಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಅವರು ಅರಣ್ಯ ಇಲಾಖಾಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿದ್ದರು. ನಂತರ ಜಂಟಿ ಸರ್ವೆ ಆರಂಭಗೊಂಡಿತ್ತು. ಈ ಮಧ್ಯೆ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಅವರು ಶಾಸಕ ಹರೀಶ್ ಪೂಂಜ ಮತ್ತಿತರರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಚಾರ್ಚ್‌ಶೀಟ್ ಸಲ್ಲಿಕೆಯಾಗಿದ್ದು ಈ ಜಾರ್ಜ್ ಶೀಟ್ ರದ್ದು ಪಡಿಸುವಂತೆ ಹರೀಶ್ ಪೂಂಜ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಚಾರ್ಜ್ ಶೀಟ್ ಆದ ೩ ಪ್ರಕರಣದಲ್ಲಿಯೂ ಹರೀಶ್ ಪೂಂಜ ಫೈಟ್: ತನ್ನ ವಿರುದ್ದ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಮೂರು ಪ್ರಕರಣಗಳ ದೋಷಾರೋಪಣಾ ಪಟ್ಟಿಯ ವಿರುದ್ಧ ಶಾಸಕ ಹರೀಶ್ ಪೂಂಜ ಅವರು ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಅಕ್ರಮ ಗಣಿಗಾರಿಕೆ ಮತ್ತು ಸ್ಫೋಟಕ ಕಾಯಿದೆಯಡಿ ಬಂಧಿತನಾಗಿರುವ ಬಿಜೆಪಿ ತಾಲೂಕು ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮೇ ೧೮ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿ ಪೊಲೀಸರಿಗೆ ಬೆದರಿಕೆ ಒಡ್ಡಿದ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ (ಐಪಿಸಿ ೩೫೩ ಮತ್ತು ೫೦೪)ದಲ್ಲಿ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್‌ಗೆ ಸಂಬಂಧಿಸಿ ಹರೀಶ್ ಪೂಂಜ ಮತ್ತು ೨೮ ಮಂದಿಯ ವಿರುದ್ಧ ಮತ್ತು ಶಶಿರಾಜ್ ಶೆಟ್ಟಿ ಬಂಧನ ಖಂಡಿಸಿ ಮೇ ೨೦ರಂದು ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕಾನೂನುಬಾಹಿರವಾಗಿ ಜನರನ್ನು ಗುಂಪು ಸೇರಿಸಿ ಪ್ರತಿಭಟನಾ ಸಭೆ ನಡೆಸಿ ಪ್ರಸ್ತುತ ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲೂ ಸಿದ್ಧ ಎಂದೂ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದೂ ಬೆದರಿಸಿ ಸಾರ್ವಜನಿಕ ನೌಕರರಾದ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ, ಇತರ ಪೊಲೀಸ್ ಅಧಿಕಾರಿಗಳಿಗೆ, ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ ಜೀವ ಬೆದರಿಕೆ ಒಡ್ಡಿ ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿದ ಆರೋಪದಡಿ (ಐಪಿಸಿ ೧೪೩, ೧೪೭, ೩೪೧, ೫೦೪, ೫೦೬ ಜೊತೆಗೆ ೧೪೯) ದಾಖಲಾದ ಕೇಸ್‌ಗೆ ಸಂಬಂಧಿಸಿ ಹರೀಶ್ ಪೂಂಜ ಮತ್ತು ೩೭ ಮಂದಿಯ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಕೆಯಾಗಿದೆ.
ಹರೀಶ್ ಪೂಂಜ ವಿರುದ್ಧ ದಾಖಲಾದ ಎರಡೂ ಕೇಸ್‌ಗಳ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದ್ದ ಪೊಲೀಸ್ ಅಧಿಕಾರಿಗಳು ಶಾಸಕರು ಮತ್ತಿತರರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮೇ.೨೮ರಂದು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ತನಿಖೆಗಾಗಿ ಎಸ್.ಪಿ. ರಿಷ್ಯಂತ್ ಸಿ.ಬಿ. ಅವರಿಂದ ನಿಯೋಜಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುವ ಪುತ್ತೂರು ನಗರ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಜಿ.ಜೆ. ಅವರು ಶಾಸಕ ಹರೀಶ್ ಪೂಂಜ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಈ ದೋಷಾರೋಪಣಾ ಪಟ್ಟಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಹರೀಶ್ ಪೂಂಜ ಅವರು ಹೈಕೋರ್ಟ್ ಸೂಚನೆ ಮೇರೆಗೆ ವಿಚಾರಣಾ ನ್ಯಾಯಾಲಯಕ್ಕೆ ಡಿಜ್ಜಾರ್ಜ್ ಅಪ್ಲಿಕೇಶನ್ ಸಲ್ಲಿಸಿದ್ದು ಆ.೨೦ರಂದು ಮುಂದಿನ ವಿಚಾರಣೆ ನಿಗದಿಯಾಗಿದೆ. ಇದರೊಂದಿಗೆ ಕಳಂಜ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ದೋಷಾರೋಪಣಾ ಪಟ್ಟಿ ಮತ್ತು ಕಾಂಗ್ರೆಸ್ ಮುಂದಾಳು ನಮಿತಾ ಪೂಜಾರಿ ಅವರು ದಾಖಲಿಸಿದ್ದ ದೂರಿನ ವಿರುದ್ಧ ಹರೀಶ್ ಪೂಂಜ ಅವರು ಕಾನೂನು ಸಮರ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here