ಬೆಳ್ತಂಗಡಿ: ತಾಲೂಕು ಆಡಳಿತದಿಂದ ಆಡಳಿತ ಸೌಧದ ಮುಂಭಾಗದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಯವರ ಕುರಿತು ಶಾಸಕ ಹರೀಶ್ ಪೂಂಜ ಅವಮಾನಕಾರಿಯಾಗಿ ಮಾತನಾಡಿದ್ದು, ಕ್ರಮ ಕೈಗೊಳ್ಳಲು ಆಗ್ರಹಿಸಿ ಕಾಂಗ್ರೆಸ್ ಹಾಗೂ ಸಿಪಿಎಂ ಮುಖಂಡರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮನವಿ ಮಾಡಿದ್ದಾರೆ.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷ ನೆಲೆಯಲ್ಲಿ ಮಾತನಾಡುತ್ತಾ, ಕೇವಲ ಶಾಂತಿಯಿಂದ ಕೇವಲ ಚರಕ ತಿರುಗಿಸಿದ್ದರಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲವೆಂದು ಸರ್ಕಾರಿ ಅಧಿಕೃತ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯ ಕುರಿತು ಅವಮಾನದ ರೀತಿಯಲ್ಲಿ ಭಾಷಣ ಮಾಡಿರುವುದ್ದು, ಸಮಾಜದಲ್ಲಿ ಹಿಂದೂ- ಮುಸ್ಲಿಂ ಸಮುದಾಯದವರಲ್ಲಿ ಕಂದಕವನ್ನು ಸೃಷ್ಟಿ ಮಾಡಿ ಸಮಾಜದ ನೆಮ್ಮದಿ ಮತ್ತು ಶಾಂತಿಯನ್ನು ಕದಡುವಂತೆ ಪ್ರೇರೇಪಿಸಿದ್ದಾರೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಮ್ ನಾಗೇಶ್ ಕುಮಾರ್ ಗೌಡ ಮತ್ತು ಸಿಪಿಐಎಮ್ ಮುಖಂಡ ಬಿ.ಎಂ.ಭಟ್ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ್ ಕುಕ್ಕೆಡಿ,ಅರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸೆಬಾಸ್ಟಿಯನ್, ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್ ಮಾಲಾಡಿ, ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಅಮೀನ್ ಹಾಗೂ ಪಕ್ಷದ ಪ್ರಮುಖರಾದ ಸದಾನಂದ ನಾಲ್ಕೂರು ಉಪಸ್ಥಿತರಿದ್ದರು.