ಬೆಳ್ತಂಗಡಿ: ಸೈoಟ್ ಮೇರಿಸ್ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಸೇನಾಧಿಕಾರಿ ಬಿ. ಎಂ ಗೌಡ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸಲ್ಲಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸೇನಾಧಿಕಾರಿ ಬಿ. ಎಂ. ಗೌಡ, ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೀತಿ ಜಾರ್ಜ್, ಶಾಲಾ ಸಂಚಾಲಕಿ ಸಿಸ್ಟರ್ ಎಲ್ಸಿ ಪಾಲೆಟ್, ಶಾಲಾ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷ ಜಾರ್ಜ್ ವಿ.ವಿ ಹಾಗೂ ಸದಸ್ಯರು, ಶಿಕ್ಷಕ ಪ್ರತಿನಿಧಿ ಶ್ರೀಮತಿ ಮಮತಾ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು. ನಂತರ ಮುಖ್ಯ ಅತಿಥಿ ಸ್ಥಾನದಲ್ಲಿ ಸೇನಾಧಿಕಾರಿ ಬಿ.ಎಮ್ ಗೌಡ ಮಾತನಾಡುತ್ತಾ,” ಸ್ವತಂತ್ರ ಭಾರತದಲ್ಲಿ ಮೌಲ್ಯಯುತವಾಗಿ ಜೀವನ ಸಾಗಿಸುವ ವಿಧಾನಗಳನ್ನು ನಾವು ಕಲಿಯಬೇಕು”ಎಂದು ತಿಳಿಸಿದರು. ಬಳಿಕ ವಿದ್ಯಾರ್ಥಿಗಳಿಂದ ನಡೆದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು.
ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳು ನಿರೂಪಿಸಿ, ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೀತಿ ಜಾರ್ಜ್ ಸ್ವಾಗತಿಸಿ, ಸಹಶಿಕ್ಷಕಿ ದೀಕ್ಷಿತಾ ಇವರು ವಂದನಾರ್ಪಣೆಗೈದರು.