ಉಜಿರೆ: ಬೇಸಾಯ ಕಾಲದಲ್ಲಿ ಕರಾವಳಿ ಜನರಿಗೆ ಉತ್ಸವ ಕಾಲ. ಇಲ್ಲಿನ ಜನರು ಗದ್ದೆಗಳಲ್ಲಿ ತಮ್ಮ ಬಹುತೇಕ ಜೀವನ ಕಾಣುವವರು. ಇಂತಹ ಗದ್ದೆಗಳಲ್ಲಿ ಹಿಂದಿನ ಆಟೋಟಗಳು ಮರೆಯಾಗುತ್ತಿವೆ. ಅನೇಕ ಚರ್ಮರೋಗಗಳಿಗೆ ಕೆಸರು ಔಷಧವಾಗಿದೆ. ಈಗಿನ ಕಾಲದ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳ ಮೂಲಕವಾದರೂ ಕೆಸರಿನ ಪರಿಚಯ ಆಗುತ್ತಿರುವುದು ಸಂತೋಷದಾಯಕ ವಿಚಾರ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಹೇಳಿದರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಉಜಿರೆಯ ಪೆರ್ಲದ ಕೆಸರು ಗದ್ದೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ನಡೆದ ಕೆಸರಿನಲ್ಲಿ ಕಸರತ್ತು ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಥಳೀಯ ಪ್ರಗತಿಪರ ಕೃಷಿಕ ರಾಮಣ್ಣ ನಾಯ್ಕ್ ಸ್ಪರ್ಧೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆಸರು ಗದ್ದೆ ಆಟೋಟಗಳಿಗೆ ಸಂಬಂಧಿಸಿದ ವಿಶೇಷವಿರುವ ಭಿತ್ತಿಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕೆಸರು ಗದ್ದೆಯಲ್ಲಿ ಓಟ , ಉಪ್ಪು ಮೂಟೆ , ಸೋಗೆ ಎಳೆಯುವುದು , ಹಗ್ಗ ಜಗ್ಗಾಟ , ವಾಲಿಬಾಲ್ ಮುಂತಾದ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ರಾ.ಸೇ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ , ಸಹ ಕಾರ್ಯಕ್ರಮಾಧಿಕಾರಿ ಪದ್ಮಶ್ರೀ ರಕ್ಷಿತ್ , ಹಿರಿಯ ಸ್ವಯಂ ಸೇವಕರಾದ ಧನುಷ್ ಕೆ. ಪಿ , ಶಶಿರಾಜ್ , ಭರತ್ ಕೆ , ಸಾಯಿ ಕಿರಣ್ , ಭರತ್ ರಾವ್ , ವೀರೇಶ್ ಮುಂತಾದವರು ಉಪಸ್ಥಿತರಿದ್ದರು.
ಸ್ವಯಂ ಸೇವಕಿ ಅಂಜನಾ ಸ್ವಾಗತಿಸಿದರು.ಘಟಕದ ನಾಯಕಿ ಪ್ರಾಪ್ತಿ ಗೌಡ ನಿರೂಪಿಸಿ, ವಂದಿಸಿದರು.