ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ , ನಿಡ್ಲೆ ಸರ್ಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಡಾll ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಡಾll ಹೇಮಾವತಿ ವಿ.ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ಸ್ವಸ್ಥ ಮತ್ತು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಈ ವಿಷಯದ ಕುರಿತಂತೆ ದುಶ್ಚಟ ದುರಭ್ಯಾಸದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸುವ ” ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ ನಡೆಯಿತು.
ಆರೋಗ್ಯವಂತ ಶರೀರ ಆತ್ಮದ ಅರಮನೆ:
ಸಂಪನ್ಮೂಲ ವ್ಯಕ್ತಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ಶ ನಂದಕುಮಾರ್ ಪಿ. ಪಿ. ಮಾತನಾಡಿ, ಮಾದಕ ವ್ಯಸನವೆಂಬುದೊಂದು ರೋಗ. ಪ್ರಪಂಚದಲ್ಲಿ ಭೀಕರವಾದ ಖಾಯಿಲೆಗಳಲ್ಲಿ ಮಾದಕ ವ್ಯಸನವೂ ಒಂದು. ವಿದ್ಯಾರ್ಥಿ ಜೀವನ ಹಸಿ ಮಣ್ಣಿನ ಮಡಿಕೆ ಇದ್ದ ಹಾಗೆ. ಹದಿಹರೆಯದಲ್ಲಿ ತಂದೆ – ತಾಯಂದಿರ ಒತ್ತಡ, ಸ್ನೇಹಿತರ ಒತ್ತಡ, ಜೀವನ ಶೈಲಿ, ಮಾಧ್ಯಮ, ಆರ್ಥಿಕ ಸ್ವಾತಂತ್ರ್ಯ, ಪ್ರೀತಿಯ ಕೊರತೆ, ಅನಾರೋಗ್ಯ, ಪಾಶ್ಚಾತ್ಯ ಸಂಸ್ಕೃತಿ ನಕಾರಾತ್ಮಕ ಚಿಂತನೆಗಳು, ಈ ಎಲ್ಲಾ ಕಾರಣಗಳಿಂದಾಗಿ ಅಮಲು ಪದಾರ್ಥ ಹಾಗೂ ಇನ್ನಿತರ ವ್ಯಸನಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ.ಅತಿಯಾದ ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣ ದಿಂದಲೂ ವಿದ್ಯಾರ್ಥಿಗಳ ಮನೋಸ್ಥಿತಿ ಹಾಳಾಗುತ್ತದೆ. ವಿದ್ಯಾರ್ಥಿಗಳು ಇದರ ಬಗ್ಗೆಯೂ ಗಮನ., ರಚನಾತ್ಮಕ ಚಿಂತನೆ, ಧನಾತ್ಮಕ ಚಿಂತನೆ, ಕರ್ತವ್ಯ ಪ್ರಜ್ಞೆ, ಮತ್ತು ಪ್ರೀತಿ ವಿಶ್ವಾಸಗಳಿಂದ ಮಾತ್ರ ವ್ಯಸನ ಮುಕ್ತ ಜೀವನವನ್ನು ನಡೆಸಲು ಸಾಧ್ಯ.ಆರೋಗ್ಯವಂತ ಶರೀರವೇ ಆತ್ಮದ ಅರಮನೆ. ಅನಾರೋಗ್ಯವಂತ ಶರೀರವೇ ಆತ್ಮದ ಸೆರೆಮನೆ. ಆರೋಗ್ಯಪೂರ್ಣ ಸಮಾಜ ಅಥವಾ ದುಶ್ಚಟಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು. ಮುಖ್ಯ ಶಿಕ್ಷಕಿ ಶಾಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಕೊರಗಪ್ಪ ಗೌಡ ಹಾಗೂ ಸೇವಾಪ್ರತಿನಿಧಿ ಶೇಷಪ್ಪ ಗೌಡ ಇವರು ಉಪಸ್ಥಿತರಿದ್ದರು.