ಉಜಿರೆ: ಎಸ್ ಡಿ ಎಂ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ- ಅಲ್ಪ ಸುಖಕ್ಕಿಂತ ಎಲ್ಲರ ಸಂತಸದಲ್ಲಿ ಸಂತೃಪ್ತರಾಗೋಣ: ಪೂರನ್ ವರ್ಮಾ 

0

ಉಜಿರೆ: ಸಮಾಜದಲ್ಲಿ ನೊಂದ ಜೀವಗಳಿಗೆ ಧೈರ್ಯ ತುಂಬುವ ಅವಶ್ಯಕತೆ ಇದೆ. ಮಾಡುವ ಕರ್ತವ್ಯದಲಿ ಸೇವಾ ಮನೋಭಾವ ಮತ್ತು ಪ್ರೀತಿ ಜೊತೆಗೂಡಿದರೆ ಕೆಲಸದ ಉತ್ಸಾಹ ಇಮ್ಮಡಿಯಾಗುತ್ತದೆ. ಸುಖ ಮತ್ತು ಸಂತೋಷದ ತಾತ್ಪರ್ಯ ಅರಿತು, ವೈಯಕ್ತಿಕ ಅಲ್ಪ ಸುಖಕ್ಕಿಂತ ಸೇವೆಯ ಮೂಲಕ ಎಲ್ಲರ ಸಂತಸದಲ್ಲಿ ಸಂತೃಪ್ತರಾಗೋಣ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ನ ನೂತನ ಯುವ ಅಧ್ಯಕ್ಷ ಪೂರನ್ ವರ್ಮಾ ಹೇಳಿದರು.

ಇವರು ಇತ್ತೀಚೆಗೆ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಆಡಳಿತ ಮಂಡಳಿ ಆಯೋಜಿಸಿದ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ನೂತನ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ಮಾತನಾಡಿ, ಈ ಅಭಿನಂದನಾ ಕಾರ್ಯಕ್ರಮ ರೋಟರಿ ಕ್ಲಬ್ ನ ಕಾರ್ಯವೈಖರಿ ಮತ್ತು ಹೊಸ ಯೋಜನೆಗಳಿಗೆ ಮತ್ತಷ್ಟು ಧೈರ್ಯ ಮತ್ತು ಬಲ ತಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ದನ್ ಮೋಗರಾಜ್ ಮಾತನಾಡಿ, ವ್ಯಕ್ತಿತ್ವ ಹಾಗು ಸಂಸ್ಕಾರದಿಂದ ವ್ಯಕ್ತಿ ಸದೃಢನಾಗುತ್ತಾನೆ ಮತ್ತು ತನ್ನ ಕಾರ್ಯಕ್ಷಮತೆಯಿಂದ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾನೆ. ಇದಕ್ಕೆ ಪೂರನ್ ವ್ಯಕ್ತಿತ್ವವೇ ನಿದರ್ಶನ ಎಂದರು.

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ, ಸಾತ್ವಿಕ್ ಜೈನ್ ಪೂರನ್ ವರ್ಮರ ವ್ಯಕ್ತಿ ಪರಿಚಯ ಮಾಡಿ ಪೂರನ್ ಜೊತೆಗಿನ ತನ್ನ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಆಸ್ಪತ್ರೆಯ ಸಿಬ್ಬಂದಿ ದೀಪಾ ಕಾರ್ಯಕ್ರಮದಲ್ಲಿ ಅನಿಸಿಕೆಯನ್ನು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ನೂತನವಾಗಿ ಬೆಳ್ತಂಗಡಿ ರೋಟರಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡಿರುವ ಪೂರನ್ ವರ್ಮಾ ಹಾಗು ಕ್ಲಬ್ ನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ ಸಂದೇಶ್ ಕುಮಾರ್ ರಾವ್ ರನ್ನು ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರಿಂದ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮೆಡಿಕಲ್ ಸೂಪರಿಂಟೆಂಡೆಂಟ್ ದೇವೇಂದ್ರ ಕುಮಾರ್ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೋಗಿಗಳ ಸಂಯೋಜಕಿ ಹೇಮಾವತಿ ಸ್ವಾಗತಿಸಿ , ಸೃಜನ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here