ಪತ್ರಿಕಾಗೋಷ್ಠಿ- ಜೂನ್ 23: ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಸುವರ್ಣ ಮಹೋತ್ಸವ ಸಂಭ್ರಮ- 1 ಕೋಟಿ 10 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಅಂತಿಮ ಸಿದ್ಧತೆ

0

ಬೆಳ್ತಂಗಡಿ: 1974-75ರಲ್ಲಿ ಅಂದಿನ ಸಮಾಜ ಚಿಂತಕರಾಗಿದ್ದ ಬಿ.ಕೆ ಸೂರ್ಯನಾರಾಯಣ ಅವರು ಅಧ್ಯಕ್ಷರಾಗಿ, ನೇಮಿರಾಜ್ ಶೆಟ್ಟಿ ಕಾರ್ಯದರ್ಶಿಯಾಗಿ ಹಾಗೂ ಮುಹಮ್ಮದ್ ಶರೀಫ್ ಕೋಶಾಧಿಕಾರಿಯಾಗಿ ಆರಂಭಗೊಂಡ ಬೆಳ್ತಂಗಡಿ ಲಯನ್ಸ್ ಕ್ಲಬ್ ತಾಲೂಕಿನ ಸಮಗ್ರ ಅಭಿವೃದ್ಧಿಯಲ್ಲಿ ತನ್ನದೇ ರೀತಿಯ ಕೊಡುಗೆಗಳನ್ನು ನೀಡುತ್ತಾ ಇದೀಗ 50 ಸಂವತ್ಸರಗಳನ್ನು ಪೂರೈಸಿದೆ. ಜೂನ್ 23ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಂಗಣದಲ್ಲಿ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮ ವಿಶೇಷ ರೀತಿಯಲ್ಲಿ ಕಳೆಕಟ್ಟಿದೆ ಎಂದು ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ವರ್ಷದ ಅಧ್ಯಕ್ಷ ಉಮೇಶ್ ಶೆಟ್ಟಿ ಹೇಳಿದರು.

ಬೆಳ್ತಂಗಡಿ ಲಯನ್ಸ್ ಭವನದಲ್ಲಿ ಜೂ.19ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಂಗಳೂರು ಲಯನ್ಸ್ ಕ್ಲಬ್ ನವರು ಅಂದು ನಮ್ಮ ಬೆಳ್ತಂಗಡಿ ಲಯನ್ಸ್ ಕ್ಲಬ್ ಅನ್ನು ಸಂಸ್ಥಾಪಿಸಲು ಪ್ರೇರಣೆ ನೀಡಿದ್ದರು. ಸದ್ರಿ‌ಕ್ಲಬ್ ಈಗ ಉನ್ನತ ಮಟ್ಟಕ್ಕೆ ಬೆಳೆದು ಮಂಗಳೂರಿನಲ್ಲಿ, ವೇಣೂರು ಮತ್ತು ಸುಲ್ಕೇರಿಯಲ್ಲಿ ಮೂರು ಕ್ಲಬ್ಬುಗಳನ್ನು ಹಾಗೂ ಈ‌ವರ್ಷ ಯುವ ಸಮೂಹ ಒಳಗೊಂಡ ಲಿಯೋ ಕ್ಲಬ್ ಅನ್ನೂ ಸ್ಥಾಪಿಸುವ ಮಟ್ಟಕ್ಕೆ ಭದ್ರವಾಗಿ ನೆಲೆಯೂರಿದೆ ಎಂಬುದು ಹೆಮ್ಮೆ.ನಮ್ಮ ಲಯನ್ಸ್ ಸ್ಥಾಪಕ ಸದಸ್ಯರಾದ ಎಂ.ಜಿ ಶೆಟ್ಟಿ ಮತ್ತು‌ ವಿ.ಆರ್ ನಾಯಕ್ ಅವರು ಈ ಸುದೀರ್ಘ 50 ವರ್ಷಗಳ ಪಯಣದಲ್ಲಿ ಈಗಲೂ ನಮ್ಮ ಜೊತೆ ಇರುವುದು ಅವರಿಗೂ ನಮಗೂ ಹೆಮ್ಮೆಯ ಸಂಗತಿ.ಲಯನ್ಸ್ ತನ್ನ ಈ 50 ವರ್ಷದ ಪಯಣದಲ್ಲಿ ಅನೇಕ ಜನಪರ ಯೋಜನೆಗಳನ್ನು ಈ ಸಮಾಜಕ್ಕೆ ಸಮರ್ಪಿಸಿದೆ. ಸುಮಾರು 20 ಅರ್ಹ ಕುಟುಂಬಗಳಿಗೆ ಮನೆ ನಿರ್ಮಾಣ, ಶಾಲೆಗೆ ಆವರಣ ಗೋಡೆ ರಚನೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ ದಕ್ಷಿಣ ಹಾಗೂ ಓಡಿಲ್ನಾಳ ಶಾಲೆಗೆ ರಂಗ ಮಂದಿರ, ಅಳದಂಗಡಿಯಲ್ಲಿ 13 ವರ್ಷಗಳ ಕಾಲ ವೀರೇಂದ್ರ- ಸುರೇಂದ್ರ ಜೋಡುಕರೆ ಕಂಬಳ ಕೂಟ ಆಯೋಜನೆ, ಉಜಿರೆಯಲ್ಲಿ ಔಷಧ ಗಿಡಗಳ ಉದ್ಯಾನವನ ರಚನೆ, ‌13 ಕಡೆಗಳಲ್ಲಿ ಪ್ರಯಾಣಿಕರ ತಂಗುದಾಣ ರಚನೆ, ನಗರಕ್ಕೆ ಪ್ರವೇಶಿಸುವ ಇಕ್ಕೆಲಗಳಲ್ಲಿ ಪ್ರವೇಶ ದ್ವಾರ ಸಹಿತ ಕಮಾನು ರಚನೆ, ಮಚ್ಚಿನ ಸರಕಾರಿ ಶಾಲೆಗೆ ರಂಗಮಂದಿರ ಕೊಡುಗೆ, ಮುಂಡಾಜೆ ಶಾಲೆಯಲ್ಲಿ ಕ್ರೀಡಾ ಕೊಠಡಿ ರಚನೆ, ಮನೆ ಮನೆಗೆ ವಿದ್ಯುತ್ ಸಂಪರ್ಕ ಅಭಿಯಾನ ಇತ್ಯಾದಿ ಪ್ರಮುಖ ಶಾಶ್ವತ ಯೋಜನೆಗಳನ್ನು ಅನುಷ್ಠಾನಿಸಿದೆ.

ರಕ್ತದಾನ ಶಿಬಿರ, ಆರೋಗ್ಯ ಜಾಗೃತಿ, ಶೈಕ್ಷಣಿಕ ದತ್ತು ಸ್ವೀಕಾರ, ಪ್ರತಿಭಾ ಪ್ರೋತ್ಸಾಹ, ಪೀಠೋಪಕರಣಗಳ ಒದಗಣೆ, ಕನ್ನಡ ಶಾಲೆಗಳಿಗೆ ಬರೆಯುವ ಪುಸ್ತಕ ಒದಗಣೆ, ವನಸಂವರ್ಧನಾ ಕಾರ್ಯಕ್ರಮಗಳು, ವೈದ್ಯಕೀಯ ನೆರವು ಹೀಗೆ ಬಹುವಿಧದ ಸೇವೆಗಳ ಮೂಲಕ ಕೋಟ್ಯಾಂತರ ರೂ. ಗಳನ್ನು ಈ‌ ತಾಲೂಕಿಗೆ ಸಮರ್ಪಿಸಿದೆ. ದಿವಂಗತ ಎನ್.ಎ ಗೋಪಾಲ ಶೆಟ್ಟಿ ಶೆಟ್ಟಿ ಅವರು ಅಧ್ಯಕ್ಷರಾಗಿದ್ದಾಗ 2016 ನೇ ಸಾಲಿನಲ್ಲಿ ನಮ್ಮ ಕ್ಲಬ್ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿತ್ತು. ನಮ್ಮ ಕ್ಲಬ್ಬಿನಿಂದ ಡಾ.ಗಂಗಾಧರ ಶೇಖ ಅವರು ಜಿಲ್ಲಾ ರಾಜ್ಯಪಾಲರೂ ಆಗಿದ್ದರು ಎಂಬುದು‌ ಸ್ಮರಣೀಯ ವಿಚಾರ.

ಸುವರ್ಣ ಮಹೋತ್ಸವ ವರ್ಷವಾದ ಈ ಅವಧಿಯಲ್ಲೇ 500 ಸೇವಾ ಚಟುವಟಿಕೆ ಗುರಿಯನ್ನು ಪೂರೈಸಲಾಗಿರುತ್ತದೆ. ಪ್ರಸ್ತುತ ಸಾಲಿನಲ್ಲೇ 4 ಅರ್ಹ ಕುಟುಂಬಕ್ಕೆ ಗೃಹ ನಿರ್ಮಾಣ, 4 ಪ್ರಯಾಣಿಕರ ತಂಗುದಾಣಗಳ ಸಮರ್ಪಣೆ, ಲಯನ್ಸ್ ಸದಸ್ಯರ ಮನೆ ಬೇಟಿ ಹಾಗೂ ಸೇವಾ ಚಟುವಟಿಕೆ ನಡೆಸಲಾಗಿರುತ್ತದೆ. ವಿಶೇಷವಾಗಿ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ 1994-95 ರಲ್ಲಿ ಬೆಳ್ತಂಗಡಿ ಕ್ಯಾಂಪ್ಕೂ ರಸ್ತೆಯಲ್ಲಿ ಲಯನ್ಸ್ ಸೇವಾ ಟ್ರಸ್ಟ್ ಮೂಲಕ ಸ್ಥಾಪಿಸಲಾಗಿದ್ದ ಲಯನ್ಸ್ ಸೇವಾ ಭವನವನ್ನು ಅಂದಾಜು 1 ಕೋಟಿ 10 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಮರು ನಿರ್ಮಾಣ ಮಾಡಲಾಗುತ್ತಿದ್ದು ಅಂತಿಮ ಹಂತ ತಲುಪುತ್ತಿದೆ. ರಾಜು ಶೆಟ್ಟಿ ಬೆಂಗೆತ್ಯಾರು ಅವರ ಅಧ್ಯಕ್ಷತೆಯಲ್ಲಿರುವ ಕಟ್ಟಡ ನಿರ್ಮಾಣ ಸಮಿತಿ ಉದ್ದೇಶ ಈಡೇರಿಕೆಗಾಗಿ ಶತ ಪ್ರಯತ್ನಿಸುತ್ತಿದೆ.

ಜೂನ್ 23 ರಂದು ಸುವರ್ಣ ಮಹೋತ್ಸವ: ಸುವರ್ಣ ಮಹೋತ್ಸವ ಪ್ರಯುಕ್ತ ಜೂ.23ರಂದು ಸಂಜೆ ಭವ್ಯ ಮೆರವಣಿಗೆಯೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮ, ಚಿನ್ನರ ಚಿಲಿಪಿಲಿ, ಹಾಡಿನ ಝೇಂಕಾರ, ಸುವರ್ಣ ಮಹೋತ್ಸವ ಭವ್ಯ ಸಮಾರಂಭ, ಸಾಧಕರಿಗೆ ಸನ್ಮಾನ, 50 ವರ್ಷಗಳ ಕಾಲ ಲಯನ್ಸ್ ಚುಕ್ಕಾಣಿ ಹಿಡಿದು ಮುನ್ನಡೆಸಿದ ಪೂರ್ವಾಧ್ಯಕ್ಷರುಗಳಿಗೆ ಸನ್ಮಾನ, ಸಭಾ ಕಾರ್ಯಕ್ರಮದ ಬಳಿಕ ದೇವದಾಸ್ ಕಾಪಿಕಾಡ್ ನಟಿಸಿ ನಿರ್ದೇಶಿಸುವ “ಪುದರ್ ದೀದಾಂಡ್” ತುಳು ನಾಟಕ ಪ್ರದರ್ಶನ ನಡೆಯಲಿದೆ.

ಉಮೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ದ.ಕ ಕ್ಷೇತ್ರದ ನೂತನ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ. ಮೆಲ್ವಿನ್ ಡಿಸೋಜಾ, ಶಾಸಕರುಗಳಾದ ಹರೀಶ್ ಪೂಂಜ, ಪ್ರತಾಪ ಸಿಂಹ ನಾಯಕ್ ಮತ್ತು ಹರೀಶ್ ಕುಮಾರ್, ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೋ ಇವರು ಅಭ್ಯಾಗತರಾಗಿರಲಿದ್ದಾರೆ.ವಿಶೇಷ ಅತಿಥಿಯಾಗಿ ಚಲನ ಚಿತ್ರ ನಟ, ನಿರ್ದೇಶಕ ಹಾಗೂ ಬರಹಗಾರ ಪಟ್ರೆ ನಾಗರಾಜ್ ಬೆಂಗಳೂರು ಇವರು ಭಾಗವಹಿಸುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಅನಂತಕೃಷ್ಣ, ಲಯನ್ಸ್ ಕ್ಲಬ್ ಮಾದ್ಯಮ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಮುಂಡಾಜೆ, ಪ್ರಾಂತೀಯ ಮಾಜಿ ಅಧ್ಯಕ್ಷ ವಸಂತ ಶೆಟ್ಟಿ, ಮಾಜಿ ಕಾರ್ಯದರ್ಶಿ ತುಕಾರಾಮ ಬಿ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here