ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಧಾರ್ಮಿಕ ಶ್ರದ್ದಾ ಕೇಂದ್ರ ಹಯಾತುಲ್ ಔಲಿಯಾ ದರ್ಗಾ ಶರೀಫ್ ಕಾಜೂರುನಲ್ಲಿ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮುಸ್ಲಿಮರ ಪ್ರಮುಖ ಹಬ್ಬ ಈದುಲ್ ಅಲ್‌ಹಾ (ಬಕ್ರೀದ್) ಹಬ್ಬವನ್ನು ಭಕ್ತಿ ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಹೊಸ ವಸ್ತ್ರಗಳನ್ನು ಧರಿಸಿದ ಪುರುಷರು ಮತ್ತು ಮಕ್ಕಳು ಬೆಳಗ್ಗೆಯೇ ಮಸ್ಜಿದ್ ಗಳಿಗೆ ತೆರಳಿ ಬಕ್ರೀದ್ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು. ಬಲಿ ಪೆರ್ನಾಳ್ ಪ್ರಾರ್ಥನೆಯ ಬಳಿಕ ಪರಸ್ಪರ ಸ್ನೇಹದ ಸಂಕೇತವಾಗಿ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಮಹಿಳೆಯರೂ ಕೂಡ ಹೊಸ ವಸ್ತ್ರಗಳನ್ನು ಧರಿಸಿ ವಿಶೇಷ ತಿಂಡಿ ತಿನಿಸು, ಖಾದ್ಯಗಳನ್ನು ತಯಾರಿಸಿ ಕುಟುಂಬದ ಸದಸ್ಯರ ಜೊತೆ ಸಹಭೋಜನ ಮಾಡುವ ಮೂಲಕ ಮನೆಯಲ್ಲೇ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು.
ಕಾಜೂರಿನಲ್ಲಿ ವಿಶೇಷ ಪ್ರಾರ್ಥನೆ: ನಾಡಿನ ಸರ್ವಧರ್ಮೀಯರ ಸೌಹಾರ್ದ ಕೇಂದ್ರವಾದ ಇತಿಹಾಸ ಪ್ರಸಿದ್ಧ ಧಾರ್ಮಿಕ ಶ್ರದ್ದಾ ಕೇಂದ್ರ ಕಾಜೂರು ಮಸ್ಜಿದ್ ನಲ್ಲಿ ಈದುಲ್ ಅಲ್‌ಹಾ (ಬಕ್ರೀದ್) ಹಬ್ಬದ ಪ್ರಾರ್ಥನೆಗೆ ಕಾಜೂರು ತಂಙಳ್ ನೇತೃತ್ವ ನೀಡಿದರು. ಹಬ್ಬದ ಪ್ರಾರ್ಥನೆ ಬಳಿಕ ಇಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ಔಲಿಯಾಗಳ ಸನ್ನಿದಾನದಲ್ಲಿ ವಿಶ್ವ ಶಾಂತಿಗಾಗಿ ದುಆ ನೆರವೇರಿಸಲಾಯಿತು.
ಈದ್ ಸಂಭ್ರಮದಲ್ಲಿ ಬೆಳ್ತಂಗಡಿ ತಾಲೂಕು ಇನ್ಸ್ಪೆಕ್ಟರ್ ಸುಬ್ಬಾಪೂರ್ ಮಠ್ ಸಹಿತ ಸಿಬ್ಬಂದಿಗಳು ಭಾಗವಹಿಸಿದ್ದರು.