ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ರಸ್ತೆಗೆ ಅಡ್ಡ ನಿಂತ ಕಾರಣ ಸುಮಾರು ಎರಡು ಕಿ.ಮೀ. ಟ್ರಾಫಿಕ್ ಜಾಮ್ ಉಂಟಾದ ಘಟನೆ ಜೂನ್ 14ರ ಶುಕ್ರವಾರದಂದು ಬೆಳ್ಳಂ ಬೆಳಗ್ಗೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ 7 ಹಾಗೂ 8ನೇ ತಿರುವಿನ ಮಧ್ಯೆ ರಸ್ತೆಯಲ್ಲಿ ಸುಮಾರು ಅರ್ಧ ತಾಸು ಅಡ್ಡಲಾಗಿ ಆಹಾರ ತಿನ್ನುತ್ತಾ ನಿಂತ ಸಲಗ ಬಳಿಕ ಕಾಡಿನತ್ತ ಹೋಗಿದೆ.ರಸ್ತೆಯಲ್ಲಿ ಮರವನ್ನು ಮುರಿದು ಹಾಕಿ ತಿನ್ನುತ್ತಿದ್ದ ಆನೆಯನ್ನು ಕಾಣುತ್ತಿದ್ದಂತೆ ಸರಕಾರಿ ಬಸ್ ಚಾಲಕ ಆನೆ ರಸ್ತೆ ದಾಟುವ ತನಕ ಬಸ್ ನಿಲ್ಲಿಸಿದ್ದಾರೆ.ಈ ವೇಳೆ ರಸ್ತೆಯ ಎರಡು ಕಡೆ ಅರ್ಧ ತಾಸಿಗಿಂತ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರಲ್ಲಿ ಭೀತಿ ಉಂಟಾಯಿತು. ಕೆಲವು ಪ್ರಯಾಣಿಕರು ಆನೆಯನ್ನು ಓಡಿಸುವ ಪ್ರಯತ್ನ ನಡೆಸಿದರು.
ಆನೆ ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯ ಮಾಡದೆ ತನ್ನ ಆಹಾರ ಸೇವನೆ ಮುಗಿದ ಬಳಿಕ ಮೆಲ್ಲನೆ ಅರಣ್ಯದ ಕಡೆ ಹೆಜ್ಜೆ ಹಾಕಿದೆ.ಕಳೆದ ಎರಡು ತಿಂಗಳಿನಿಂದ ಚಾರ್ಮಾಡಿ ಘಾಟಿಯ ಪರಿಸರದಲ್ಲಿ ಹಗಲು ಮತ್ತು ರಾತ್ರಿ ಆಗಾಗ ಕಾಡಾನೆ ರಸ್ತೆಯಲ್ಲಿ ಕಂಡುಬರುತ್ತಿದೆ. ಕೆಲವೊಮ್ಮೆ ರಸ್ತೆ ಬದಿ ನಿಲ್ಲುವ ಕಾಡಾನೆ ಇನ್ನು ಕೆಲವು ಬಾರಿ ರಸ್ತೆಯಲ್ಲಿ ನಿಂತು ಕಾಡಿನಿಂದ ಮರಗಳನ್ನು ತಂದು ತಿನ್ನುವುದು ಕಂಡುಬರುತ್ತಿದೆ. ಇದರಿಂದ ಘಾಟಿಯಲ್ಲಿ ಆಗಾಗ ಟ್ರಾಫಿಕ್ ಜಾಮ್, ಪ್ರಯಾಣಿಕರಲ್ಲಿ ಭೀತಿಯ ವಾತಾವರಣ ಸಹಜವಾಗಿ ಕಂಡುಬರುತ್ತದೆ. ಈ ಆನೆ ಚಾರ್ಮಾಡಿ ಘಾಟಿಯಲ್ಲಿ ಬೀಡು ಬಿಟ್ಟಿದ್ದು ಸಮೀಪದ ಬಾಂಜಾರು ಮಲೆ ರಸ್ತೆಯಲ್ಲೂ ಕೆಲವೊಮ್ಮೆ ಕಂಡುಬರುತ್ತದೆ.
ಮಂಜಿನ ವಾತಾವರಣ: ಪ್ರಸ್ತುತ ಚಾರ್ಮಾಡಿ ಘಾಟಿಯಲ್ಲಿ ಹಗಲು-ರಾತ್ರಿ ಭಾರಿ ಮಂಜಿನ ವಾತಾವರಣ ಕಂಡುಬರುತ್ತಿದ್ದು, ಮುಂದಿನಿಂದ ಬರುವ ವಾಹನಗಳು ಗಮನಕ್ಕೆ ಬಾರದಷ್ಟು ದಟ್ಟವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಾಡಾನೆ ರಸ್ತೆ ಮಧ್ಯೆ ಇದ್ದರೂ ತಕ್ಷಣ ಗಮನಕ್ಕೆ ಬರುವುದಿಲ್ಲ. ಸದ್ಯ ಘಾಟಿ ರಸ್ತೆಯಲ್ಲಿ ಭಾರಿ ಸಂಖ್ಯೆಯ ವಾಹನಗಳ ಓಡಾಟವೂ ಇದೆ. ಘಾಟಿ ಭಾಗದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿದ್ದು ಯಾವುದೇ ಮಾಹಿತಿಗಳನ್ನು ತಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸಂಚಾರಿ ಮೂಡಿಗೆರೆ ನಿವಾಸಿ ಖಾದರ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.