ಉಜಿರೆ: ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಭೂಮಿಯಲ್ಲಿ ಜೀವಿಸಲು ಕಷ್ಟವಾಗಬಹುದು ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್) ಕಾಲೇಜಿನಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ರತ್ನಮಾನಸ ವಿದ್ಯಾರ್ಥಿ ನಿಲಯದ ನಿಲಯಪಾಲಕ ಯತೀಶ್ ಕೆ ಬಳಂಜ ನುಡಿದರು.
ಈಗಿನ ಕಾಲದಲ್ಲಿ ಗಿಡ ನೆಡುವುದು ಕೇವಲ ಪರಿಸರ ದಿನಾಚರಣೆಗೆ ಸೀಮಿತವಾಗಿದೆ. ಪರಿಸರ ನಾಶದಿಂದಾಗಿ, ತಾಪಮಾನದ ಏರಿಕೆ ಮಾತ್ರವಲ್ಲ ಕಾಡಿನಲ್ಲಿನ ಪ್ರಾಣಿಗಳನ್ನು ನಾಡಿನಲ್ಲಿ ಕಾಣುತ್ತಿದ್ದೇವೆ ಹಾಗೂ ವಿವಿಧ ರೀತಿಯ ಆಶ್ರಯ ನೀಡುವ ಆರೋಗ್ಯಕರ ಹಣ್ಣಿನ ಮರಗಳ ಸಂಖ್ಯೆ ಈಗ ಕಡಿಮೆಯಾಗಿದೆ. ಪರಿಸರ ನಾಶಕ್ಕೆ ಮುಖ್ಯ ಕಾರಣ ಅನಕ್ಷರಸ್ಥರು ಅಲ್ಲ, ಅಕ್ಷರಸ್ಥರ ಅಹಂಕಾರ. ನಮಗೆ ಪುಸ್ತಕ ಮಾತ್ರ ಪ್ರಪಂಚವಲ್ಲ.ಪರಿಸರವನ್ನು ಓದಬೇಕು, ಅಭ್ಯಾಸ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನ ಪ್ರಾಂಶುಪಾಲ ಸಂತೋಷ್ ಆಲ್ಬರ್ಟ್ ಸಾಲ್ಡಾನ ಇವರು ಮಾತನಾಡುತ್ತಾ ವಿವಿಧ ಗಿಡಗಳನ್ನು ನೆಟ್ಟರೆ ಭೂಮಿಯನ್ನು ಸ್ವರ್ಗ ಮಾಡಬಹುದು ಎಂಬ ಮಾತಿನಂತೆ ಅತೀ ಹೆಚ್ಚು ಉಪಯೋಗಕ್ಕೆ ಬರುವ ಗಿಡಗಳನ್ನು ನೆಟ್ಟರೆ ಇರುವ ಒಂದೇ ಭೂಮಿಯನ್ನು ಸ್ವರ್ಗ ಮಾಡಬಹುದು. ನಮ್ಮಿಂದ ಗಿಡ-ಮರ ಬೆಳೆಯಬೇಕು. ಮರಗಳಿಗೂ ಮಾನವರಿಗೂ ಸಂಪರ್ಕವಿರಬೇಕು. ಆಗ ಮಾತ್ರ ಪರಿಸರವು ಮುಂದಿನ ಜನಾಂಗಕ್ಕೆ ಉಳಿಯುತ್ತದೆ. ಇದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
ನಂತರ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಅದ್ಭುತ ಅರ್ಥ ನೀಡುವ ಪರಿಸರ ಗೀತೆಯನ್ನು ಹಾಡಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕ ತಿರುಮಲೇಶ್ ರಾವ್ ಎನ್ ಕೆ, ವಿದ್ಯಾಶ್ರೀ ಪಿ, ಅನುಷಾ ಡಿ.ಜೆ, ಚೈತ್ರ ಹಾಗೂ ಪ್ರಥಮ ಮತ್ತು ದ್ವಿತೀಯ ಬಿ.ಎಡ್. ನ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಥಮ ಬಿ.ಇಡಿ. ಯ ಪ್ರಶಿಕ್ಷಣಾರ್ಥಿಗಳಾದ ವಿಶಾಲ ಸ್ವಾಗತಿಸಿ, ದಿವ್ಯ ಕೆ ಎಸ್ ವಂದಿಸಿ, ರಾಫಿಯಾ ಅತಿಥಿ ಪರಿಚಯಿಸಿ, ರಶ್ಮಿ ಕಾರ್ಯಕ್ರಮ ನಿರೂಪಿಸಿದರು.