ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಉದ್ಯಮಶೀಲತೆ ಕಾರ್ಯಾಗಾರ- ಸ್ಪಷ್ಟ ಗುರಿಯೊಂದಿಗಿನ ಕೌಶಲ್ಯಯುತ ಹೆಜ್ಜೆಗಳಿಂದ ಯಶಸ್ಸು: ಕೆ.ಎನ್.ಜನಾರ್ಧನ

0

ಉಜಿರೆ: ಸ್ಪಷ್ಟಗುರಿ ಮತ್ತು ಕೌಶಲ್ಯಯುತ ಹೆಜ್ಜೆಗಳ ಮೂಲಕ ಯಶಸ್ವಿ ಉದ್ಯಮಿಯಾಗಬಹುದು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯನಿರ್ವಹಣಾ ನಿರ್ದೇಶಕ ಕೆ.ಎನ್.ಜನಾರ್ಧನ ಹೇಳಿದರು.

ಉಜಿರೆ ಎಸ್. ಡಿ.ಎಂ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ಅಧ್ಯಯನ ಮತ್ತು  ಸಂಶೋಧನಾ ವಿಭಾಗವು ಎಂಟರ್ಪ್ರೆನ್ಶಿಪ್ ಡೆವಲಪ್ಮೆಂಟ್ ಸೆಲ್ ಸಹಯೋಗದಲ್ಲಿ ಆಯೋಜಿದ್ದ ಉದ್ಯಮಶೀಲತೆಯ ಅಭಿವೃದ್ಧಿ ಕುರಿತಾದ ಎರಡು ದಿನಗಳ ಕಾರ್ಯಗಾರವನ್ನು ಬುಧವಾರ ಉದ್ಘಾಟಿಸಿ ಅವರು  ಮಾತನಾಡಿದರು.

ಕೇವಲ ಶಿಕ್ಷಣವೊಂದರಿದ ಬೆಳವಣಿಗೆಯ ಮಾನದಂಡವನ್ನು ನಿರ್ಧರಿಸಲಾಗುವುದಿಲ್ಲ. ನಿರಂತರವಾದ ಸಣ್ಣ ಪ್ರಯತ್ನ ಮತ್ತು ಯೋಜನೆಗಳಿಂದ ಬೃಹತ್ ಉದ್ಯಮಗಳನ್ನು ಸ್ಥಾಪಿಸಿ ಯಶಸ್ವಿಯಾಗಬಹುದು. ನಾನು ಏನು ಮಾಡಬೇಕು ಎನ್ನುವ ಸ್ಪಷ್ಟ ಗುರಿ ವಿದ್ಯಾರ್ಥಿ ದೆಸೆಯಲ್ಲಿಯೇ ಇರಬೇಕು. ಸಾಧನೆಯ ಬಯಕೆಯಿದ್ದರೆ ಸಾಲದು, ಅದನ್ನು ತಲುಪುವಲ್ಲಿ ತೀವ್ರ ಪ್ರಯತ್ನವನ್ನು ಪಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಉದ್ಯೋಗಕ್ಕಾಗಿ ಸರ್ಕಾರಗಳನ್ನು ಅವಲಂಬಿಸದೇ ಯುವ ಜನತೆ ಉದ್ಯಮಿಗಳಾಗಿ ಭವಿಷ್ಯವನ್ನು ಕಂಡುಕೊಳ್ಳಬೇಕು. ತಮ್ಮ ಸಾಮರ್ಥ್ಯದ ಬಗ್ಗೆ ಆತ್ಮವಿಶ್ವಾಸ ಬೆಳೆಸಿಕೊಂಡು ದೇಶದ ಅಭಿವೃದ್ಧಿಯ ಜವಾಬ್ದಾರಿಯನ್ನು ಯುವ ಸಮುದಾಯ ತೆಗೆದುಕೊಳ್ಳಬೇಕು. ಅದಕ್ಕಾಗಿ ಸಮಯ ಪ್ರಜ್ಞೆ, ಶಿಸ್ತು, ಬದ್ಧತೆ, ಆರೋಗ್ಯ ಪ್ರಜ್ಞೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ತಕ್ಷಣದ ಸಂತೃಪ್ತಿಯಿಂದ ದೂರದ ಗುರಿಗಳನ್ನು ಮರೆಯಬಾರದು. ವ್ಯವಹಾರವನ್ನು ಕಲಿತು, ಬದಲಾವಣೆಗಳಿಗೆ ಒಗ್ಗಿಕೊಂಡು ಹೊಸತನವನ್ನು ಮೈಗೂಡಿಸಿಕೊಂಡು ಮುಂದುವರೆಯಿರಿ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗ್ಡೆ ಮಾತನಾಡಿದರು. ವಿಷಯ ಸ್ಪಷ್ಟತೆ, ಭಾವನಾತ್ಮಕವಾಗಿ ಗಟ್ಟಿಯಾಗಿರುವುದು ಮತ್ತು ಉತ್ತಮ ಸಾಮಾಜಿಕ ಪ್ರಜ್ಞೆಯಿಂದಾಗಿ ವೃತ್ತಿ ಸ್ಥಳಗಳಲ್ಲಿ ಯಶಸ್ವಿಯಾಗಬಹುದು. ಉದ್ಯಮಗಳನ್ನು ಸ್ಥಾಪಿಸಲು ಬ್ಯಾಂಕ್ ಗಳಿಂದ ಸಾಲ ಸೌಲಭ್ಯಗಳಿವೆ. ರುಡ್ ಸೆಟ್ ಸಂಸ್ಥೆ ಸ್ವ ಉದ್ಯೋಗಕ್ಕೆ ತರಬೇತಿ ನೀಡುತ್ತಿದೆ. ಭವಿಷ್ಯದಲ್ಲಿ ಇವುಗಳ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ. ಪಿ, ವಾಣಿಜ್ಯ ಅಧ್ಯಯನ ಮತ್ತು  ಸಂಶೋಧನಾ ವಿಭಾಗ ಮುಖ್ಯಸ್ಥೆ ಡಾ.ಪ್ರಿಯಾಕುಮಾರಿ ಎಸ್.ವಿ, ಎಂಟರ್ಪ್ರೆನ್ಶಿಪ್ ಡೆವಲಪ್ಮೆಂಟ್ ಸೆಲ್ ನ ಸಂಯೋಜಕಿ ಸ್ವಾತಿ. ಬಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರಾವ್ಯ ನಿರೂಪಿಸಿದರು. ಪ್ರಾಧ್ಯಾಪಕಿ ಮಮತಾ. ಕೆ ಸ್ವಾಗತಿಸಿದರು. ಮನೋಜ್ ವಂದಿಸಿದರು.

LEAVE A REPLY

Please enter your comment!
Please enter your name here