ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ೮ , ಪದವೀಧರ ಕ್ಷೇತ್ರದಲ್ಲಿ ೧೦ ಅಭ್ಯರ್ಥಿಗಳು

0

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ೧೦ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ೮ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಜೂನ್ ೩ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದೆ. ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿ ಆಡಳಿತ ಸೌಧದಲಿರುವ ತಾಲೂಕು ಕಚೇರಿಯಲ್ಲಿ ಮತದಾನ ನಡೆಯಲಿದೆ.
ಅಂತಿಮ ಕಣದಲ್ಲಿ ಅಭ್ಯರ್ಥಿಗಳು: ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಮುಖಂಡರಾದ ಶಿವಮೊಗ್ಗ ವಿನೋಭನಗರ ಬನಶಂಕರಿ ನಿಲಯದ ಡಾ|ಧನಂಜಯ ಸರ್ಜಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗದ ಆಯನೂರು ಮಂಜುನಾಥ್, ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿಯ ಮಾಜಿ ಶಾಸಕ ಬಿಜೆಪಿಯ ರಘುಪತಿ ಭಟ್ ಸೇರಿದಂತೆ ೧೦ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಮುಖಂಡ, ಹಾಲಿ ಪರಿಷತ್ ಸದಸ್ಯರಾಗಿರುವ ಚಿಕ್ಕಮಗಳೂರು ಹೊಸಮನೆ ಬಡಾವಣೆಯ ಎಸ್.ಎಲ್. ಬೋಜೇಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊಡಗು ಜಿಲ್ಲೆಯ ಕುಶಾಲನಗರದ ಕೂಡ್ಲಾರು ನಿವಾಸಿ ಕೆ.ಕೆ.ಮಂಜುನಾಥ ಕುಮಾರ್ ಹಾಗೂ ಬಿಜೆಪಿಯಿಂದ ಅವಕಾಶ ವಂಚಿತರಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಂಗಳೂರು ನಾಗುರಿಯ ಡಾ|ಎಸ್.ಆರ್.ಹರೀಶ್ ಆಚಾರ್ಯ ಸೇರಿದಂತೆ ೮ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ರಘುಪತಿ ಭಟ್‌ಗೆ ಈಶ್ವರಪ್ಪ ಬೆಂಬಲ: ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರೂ ಪಕ್ಷದಿಂದ ಅವಕಾಶ ದೊರೆಯದೇ ಇದ್ದುದರಿಂದ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರ ಮನವೊಲಿಕೆ ಪ್ರಯತ್ನಗಳು ಫಲಿಸದೇ ಇರುವುದರಿಂದ ಅವರು ನಾಮಪತ್ರ ಹಿಂತೆಗೆದುಕೊಳ್ಳದೇ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಉಪಮುಖ್ಯಮಂತ್ರಿ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ರಘುಪತಿ ಭಟ್‌ಗೆ ಬೆಂಬಲ ಸೂಚಿಸಿದ್ದಾರೆ.
ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಂದಾಳು ಎಸ್.ಪಿ.ದಿನೇಶ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಳೆದ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತರಾಗಿದ್ದ ಇವರಿಗೆ ಟಿಕೆಟ್ ನಿರಾಕರಿಸಿರುವುದರಿಂದ ಇವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ಮತದಾರರು-ಮತಗಟ್ಟೆಗಳು: ನೈರುತ್ಯ ಪದವೀಧರ ಕ್ಷೇತ್ರದಲ್ಲಿ ೪೩,೭೨೦ ಪುರುಷರು ಮತ್ತು ೪೧,೩೬೯ ಮಹಿಳೆಯರು ಹಾಗೂ ಓರ್ವ ಇತರ ಸೇರಿದಂತೆ ಒಟ್ಟು ೮೫,೦೯೦ ಮತದಾರರಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ೧೦,೪೮೭ ಪುರುಷರು ಮತ್ತು ೧೨,೯೧೫ ಮಹಿಳೆಯರು ಸೇರಿ ಒಟ್ಟು ೨೩,೪೦೨ ಮತದಾರರಿದ್ದಾರೆ. ನೈಋತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿನ ದಕ್ಷಿಣ ಕನ್ನಡದಲ್ಲಿ ೧೬, ಕೊಡಗು-೫, ಚಿಕ್ಕಮಗಳೂರು-೧೨, ಉಡುಪಿ-೧೦, ಶಿವಮೊಗ್ಗ-೩೨ ಹಾಗೂ ದಾವಣಗೆರೆ-೪ ಸೇರಿದಂತೆ ೭೯ ಮತಟ್ಟೆಗಳನ್ನು ಸ್ಥಾಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ೧೬ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು ೨೬೫೦ ಪುರುಷರು ಮತ್ತು ೫೫೩೯ ಮಹಿಳೆಯರು ಸೇರಿ ಒಟ್ಟು ೮೧೮೯ ಮತದಾರರಿದ್ದಾರೆ. ಚಿಕ್ಕಮಗಳೂರು ೪೨೨೪, ದಾವಣಗೆರೆ ೯೭೯, ಕೊಡಗು ೧೫೭೮, ಶಿವಮೊಗ್ಗ ೪೩೬೫, ಉಡುಪಿಯಲ್ಲಿ ೪೦೬೭ ಮತದಾರರು ಮತಚಲಾವಣೆ ಹಕ್ಕು ಪಡೆದಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿನ ದಕ್ಷಿಣ ಕನ್ನಡ-೨೪, ಚಿಕ್ಕಮಗಳೂರು-೧೩, ದಾವಣಗೆರೆ-೮, ಕೊಡಗು-೬, ಶಿವಮೊಗ್ಗ-೩೮, ಉಡುಪಿ-೧೯ ಸೇರಿದಂತೆ ೧೦೮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೆಳ್ತಂಗಡಿ ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಒಟ್ಟು ೨೪ ಮತಗಟ್ಟೆಗಳಲ್ಲಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿ ಮತದಾನ ಪ್ರಕ್ರಿಯೆ ನಡೆಯಲಿದ್ದು ೮೩೭೫ ಪುರುಷರು, ೧೧೫೯೬ ಮಹಿಳೆಯರು ಸೇರಿದಂತೆ ೧೯೯೭೧ ಮತದಾರರು ಮತದಾನದ ಹಕ್ಕು ಪಡೆದಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿ ಚಿಕ್ಕಮಗಳೂರು ೧೦೨೦೬, ದಾವಣಗೆರೆ ೬೫೫೮, ಕೊಡಗು ೩೯೦೯, ಶಿವಮೊಗ್ಗ ೨೭೪೧೨ ಹಾಗೂ ಉಡುಪಿ ಜಿಲ್ಲೆಯಲ್ಲಿ ೧೭೦೩೩ ಮತದಾರರು ಮತದಾನದ ಹಕ್ಕು ಪಡೆದಿದ್ದಾರೆ.
ಈ ಬೆರಳಿಗೆ ಶಾಯಿ: ಭಾರತ ಚುನಾವಣಾ ಆಯೋಗ ಸೂಚಿಸಿರುವಂತೆ ನೈರುತ್ಯ ಪದವೀಧರ ಕ್ಷೇತ್ರದ ಮತದಾರರ ಬಲಗೈ ತೋರುಬೆರಳು, ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಬಲಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುತ್ತದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಬಲಗೈ ತೋರುಬೆರಳಿಗೆ ಶಾಯಿ ಹಾಕಲಾಗುತ್ತದೆ.
ನೋಟಾ ಇಲ್ಲ: ಜೂ.೩ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ‘ನೋಟಾ’ ಇರುವುದಿಲ್ಲ ಎಂದು ಆಯೋಗ ತಿಳಿಸಿದೆ.

ವಿಧಾನ ಪರಿಷತ್‌ನ ೧೧ ಸ್ಥಾನಗಳಿಗೆ ಜೂ.೧೩ರಂದು ಚುನಾವಣೆ: ಬೆಳ್ತಂಗಡಿಯ ಹರೀಶ್ ಕುಮಾರ್‌ಗೆ ಮತ್ತೊಮ್ಮೆ ಅವಕಾಶ ?: ಪ್ರಸ್ತುತ ಸದಸ್ಯರಾಗಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಬೆಳ್ತಂಗಡಿಯ ಕೆ.ಹರೀಶ್ ಕುಮಾರ್, ಜೆಡಿಎಸ್‌ನ ಬಿ.ಎಂ.ಫಾರೂಕ್ ಸೇರಿದಂತೆ ಮುಂದಿನ ತಿಂಗಳು ತೆರವಾಗಲಿರುವ ಕರ್ನಾಟಕ ವಿಧಾನ ಪರಿಷತ್‌ನ ೧೧ ಸ್ಥಾನಗಳಿಗೆ ಜೂನ್ ೧೩ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಜೂನ್ ೩ ಕೊನೆಯ ದಿನವಾಗಿದ್ದು ಜೂನ್ ೪ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮತದಾನ ದಿನ ಸಂಜೆ ಐದು ಗಂಟೆಗೆ ಮತ ಎಣಿಕೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಚುನಾಯಿತರಾಗಿರುವ ೧೧ ಸದಸ್ಯರ ಅವಧಿ ಜೂನ್ ೧೭ಕ್ಕೆ ಕೊನೆಗೊಳ್ಳಲಿದೆ. ಕೆ.ಹರೀಶ್ ಕುಮಾರ್, ಬಿ.ಎಂ.ಫಾರೂಕ್, ಅರವಿಂದ ಕುಮಾರ್ ಅರಳಿ, ಎನ್.ಎಸ್. ಬೋಸರಾಜು, ಕೆ.ಗೋವಿಂದರಾಜ್, ಡಾ|ತೇಜಸ್ವಿನಿ ಗೌಡ, ಮುನಿರಾಜುಗೌಡ ಪಿ.ಎಂ., ಕೆ.ಪಿ.ನಂಜುಂಡಿ, ರಘುನಾಥ ರಾವ್ ಮಲ್ಕಾಪುರೆ, ಎನ್.ರವಿಕುಮಾರ್ ಮತ್ತು ಎಸ್.ರುದ್ರೇಗೌಡ ಅವರ ಅಧಿಕಾರದ ಅವಧಿ ಕೊನೆಗೊಳ್ಳಲಿದೆ. ಇವರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರೂ ಹಾಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಬೆಳ್ತಂಗಡಿಯ ಕೆ. ಹರೀಶ್ ಕುಮಾರ್ ಅವರಿಗೆ ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಡುವ ಕುರಿತು ಕಾಂಗ್ರೆಸ್‌ನೊಳಗೆ ಮಾತುಕತೆ ನಡೆಯುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

ನಳಿನ್ ಕುಮಾರ್ ವಿಧಾನ ಪರಿಷತ್ ಪ್ರವೇಶ?- ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ವಿಧಾನ ಪರಿಷತ್ ಪ್ರವೇಶಿಸುವ ಸಾಧ್ಯತೆಗಳಿದೆ ಎಂದು ಚರ್ಚೆ ನಡೆಯುತ್ತಿದೆ. ಈ ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ನಿರಾಕರಿಸಿದ್ದರೂ ಬಂಡಾಯದ ಬಾವುಟ ಹಾರಿಸದೆ ಶಿಸ್ತಿನ ಸಿಪಾಯಿಯಾಗಿ ಕಾರ್ಯನಿರ್ವಹಿಸಿದ ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯ ಕಾಜಕಾರಣಕ್ಕೆ ಕರೆ ತರುವ ಕುರಿತು ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ. ಆರ್‌ಎಸ್‌ಎಸ್ ನಾಯಕರೂ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈಗಿನ ಲೆಕ್ಕಾಚಾರದ ಪ್ರಕಾರವೇ ಬೆಳವಣಿಗೆಗಳು ನಡೆದರೆ ನಳಿನ್ ಕುಮಾರ್ ಕಟೀಲ್ ಅವರು ಮೇಲ್ಮನೆ ಪ್ರವೇಶ ಮಾಡುವುದು ಬಹುತೇಕ ಖಚಿತವಾಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಹನ್ನೊಂದು ಸದಸ್ಯರ ಆಯ್ಕೆಗಾಗಿ ಜೂನ್ ೧೩ರಂದು ನಡೆಯುವ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಸ್ಪರ್ಧಿಸುವ ಸಾಧ್ಯತೆಗಳಿಲ್ಲ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಸಚವ ಕೋಟ ಶ್ರೀನಿವಾಸ ಪೂಜಾರಿ ಅವರು ಜಯಶಾಲಿಯಾದರೆ ಅವರಿಂದ ತೆರವಾಗುವ ರಾಜ್ಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿದೆ ಎಂದು ತಿಳಿದು ಬಂದಿದೆ.

ಚುನಾವಣಾ ವೀಕ್ಷಕರ ನೇಮಕ
ಬೆಳ್ತಂಗಡಿ: ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರ ಕ್ಷೇತ್ರಗಳಿಂದ ಕರ್ನಾಟಕ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ಭಾರತೀಯ ಚುನಾವಣಾ ಆಯೋಗ ಚುನಾವಣಾ ವೀಕ್ಷಕರನ್ನು ನೇಮಕ ಮಾಡಿದೆ. ನೈರುತ್ಯ ಪದವೀಧರ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಟಿ.ಕೆ., ಸಹಾಯಕ ಅಧಿಕಾರಿಯಾಗಿ ಮೈಸೂರು ಜಿಲ್ಲೆಯ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ರುದ್ರೇಶ್ ಕೆ.ರವರನ್ನು ನೇಮಕ ಮಾಡಲಾಗಿದೆ. ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಐಎಎಸ್ ಅಧಿಕಾರಿ ಹರ್ಷಗುಪ್ತ ಹಾಗೂ ಸಹಾಯಕ ಅಧಿಕಾರಿಯಾಗಿ ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್‌ರವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜೆ.ಸಿ. ಪ್ರಕಾಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here