ಪಾಲೇದು: ಸುಡು ಬಿಸಿಲಿನ ಝಳಕ್ಕೆ ಜನರನ್ನು ಹೈರಣಾಣಿಸಿದ್ದ ತಾಪಮಾನ ಇದೀಗ ಕೂಲ್ ಕೂಲ್ ಆಗಿದೆ. ಕಳೆದ ಹಲವು ದಿನಗಳಿಂದ ತಾಲೂಕಿನ ವಿವಿಧೆಡೆ ಮಳೆ ಸುರಿಯುತ್ತಿದ್ದು, ಕೆಲವೆಡೆ ಸಿಡಿಲು- ಗಾಳಿಗೆ ಮನೆ, ಕೃಷಿ ಭೂಮಿಗೆ ಹಾನಿಯಾಗಿದೆ. ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ಮೇ 17ರಂದು ಅಪರಾಹ್ನ ಪಾಲೇದು ಪರಿಸರದಲ್ಲಿ ಧಾರಾಕಾರ ಮಳೆ ಸುರಿದಿದೆ. ಚರಂಡಿಯ ನೀರು ಸಮರ್ಪಕವಾಗಿ ಚರಂಡಿಯಲ್ಲಿ ಹರಿಯಲು ಮಕ್ಕಳು ಚರಂಡಿ ಬಿಡು ಸುತ್ತಿರುವ ದೃಶ್ಯ ಕಂಡುಬಂದಿತು.
ಬೇಸಿಗೆ ರಜೆ/ ಮಳೆ: ಶಾಲಾ ಮಕ್ಕಳು ಬೇಸಿಗೆ ರಜೆಯ ಮೂಡ್‌ನಲ್ಲಿದ್ದಾರೆ. ನೆಂಟರ ಮನೆ, ಇತ್ಯಾದಿ ಕಡೆ ಸುತ್ತುವ ಸಂದರ್ಭ ಧೀಡಿರನೆ ಸುರಿಯವ ಮಳೆಗೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದನ್ನು ಕಂಡ ಮಕ್ಕಳು ಹಾರೆ ಹಿಡಿದು ನೀರನ್ನು ಚರಂಡಿಗೆ ಹರಿಯಲು ಬಿಡುವ ದೃಶ್ಯ ಕಂಡುಬಂದಿದೆ. 7ನೇ ತರಗತಿಯ ವಿದ್ಯಾರ್ಥಿಗಳಾದ ಮಹ್ಮದ್ ಶಾಯಿಲ್ ಮತ್ತು ಸೃಜನ್ ಮಳೆಯನ್ನು ಲೆಕ್ಕಿಸದೆ ಈ ಕೆಲಸ ಕಾರ್ಯ ಮಾಡಿರುವುದು ಶ್ಲಾಘನೀಯ.
ಮಕ್ಕಳ ಕೆಲಸ ಇತರರಿಗೆ ಮಾದರಿ: ಮಕ್ಕಳು ಮಳೆಯನ್ನು ಲೆಕ್ಕಿಸದೆ ಹಾರೆ ಹಿಡಿದು ಕೆಲಸ ಮಾಡಿರುವುದು ಮಾದರಿಯಾಗಿದೆ. ನಮ್ಮ ಪರಿಸರದ ಚರಂಡಿ ವ್ಯವಸ್ಥೆಯನ್ನು ನಾವೇ ಸರಿ ಮಾಡುವುದು ಉತ್ತಮ. ನಮ್ಮ ಗ್ರಾಮ ನಮ್ಮ ಹೆಮ್ಮೆ ಎಂಬ ಕಲ್ಪನೆ ಮಕ್ಕಳಲ್ಲಿ ಮೂಡಿರುವುದು ಆಶಾದಾಯಕ. ಸಾರ್ವಜನಿಕರು ತಮ್ಮ ತಮ್ಮ ಪರಿಸರದ ಚರಂಡಿಯ ನೀರನ್ನು ಸಮರ್ಪಕವಾಗಿ ಚರಂಡಿಗೆ ಹರಿಯಲು ಬಿಟ್ಟರೆ ರಸ್ತೆ ಹದೆಗೆಡದಿರಲು ಸಾಧ್ಯವಾಗುತ್ತದೆ. ಪಾಲೇದು ಪರಿಸರದ ಕುಕಿನಡ್ಡ, ಕೊಲ್ಯೆತ್ಯಾರು, ಕೋಡಿಬೆಟ್ಟು ಈ ಹಿಂದೆ ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಲೈನ್ ಳಿಗೆ ತಾಗುವ ಮರದ ಕೊಂಬೆಗಳನ್ನು ತೆರವುಗೊಳಿಸಿ ಸಾರ್ಥಕತೆ ಮೆರೆದಿದ್ದರು.
ಜಿಲ್ಲೆಯಲ್ಲಿ ಹಳದಿ ಅಲರ್ಟ್: ಮೇ 18ರಿಂದ 21ರವರೆಗೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮೇ 19 ಮತ್ತು 20ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಆರೆಂಜ್ ಅಲರ್ಟ್ ಇರುವ ದಿನಗಳಲ್ಲಿ ಮಿಂಚು, ಗುಡುಗು ಸಿಡಿಲುಗಳಿಂದ ಕೂಡಿದ ಭಾರಿ ಮಳೆಯಾಗಲಿದೆ. ಜಿಲ್ಲೆಯ ಕೆಲವೆಡೆ 11.55 ಸೇ.ಮೀ. 20.44 ಸೆಂ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.