ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ನಿಂದ ಕನ್ನಡ ಕಾವ್ಯ ಪರಂಪರೆಯ ಪರಿಚಯ ಮತ್ತು ಸಂಸ್ಕೃತಿಯನ್ನು ಉಳಿಸುವ ಆಂದೋಲನಕ್ಕೆ ಚಾಲನೆ

0

ಬೆಳ್ತಂಗಡಿ: ಕನ್ನಡ ಕಾವ್ಯ ಪರಂಪರೆಯ ಪರಿಚಯ ಮತ್ತು ಸಂಸ್ಕೃತಿಯನ್ನು ಉಳಿಸುವ ಹೊಸ ಆಂದೋಲನವನ್ನು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ಆರಂಭಿಸಿದೆ.

ಮನೆ ಮನೆಗಳಲ್ಲಿ ಗಮಕ ಕಾರ್ಯಕ್ರಮವನ್ನು ನಡೆಸುವ ಅಭಿಯಾನಕ್ಕೆ ಧರ್ಮಸ್ಥಳ ಗ್ರಾಮದ ನಾರ್ಯದ ಜಯರಾಮ ಕುದ್ರೆತ್ತಾಯರ ಮನೆಯಲ್ಲಿ ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು.

ಬೆಳ್ತಂಗಡಿ ತಾಲೂಕು ಘಟಕದ ಗಮಕ ಪರಿಷತ್ತಿನ ಪೂರ್ವಾಧ್ಯಕ್ಷ ಮತ್ತು ಬೆಳ್ತಂಗಡಿ ತಾಲೂಕು ದ್ವಿತೀಯ ಗಮಕ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಜಯರಾಮ ಕುದ್ರೆತ್ತಾಯರ ಮನೆಯಲ್ಲಿ ಮನೆಮನೆ ಗಮಕದ ಕಾರ್ಯಕ್ರಮವನ್ನು ಕಲಾಪೋಷಕ ಭುಜಬಲಿಯವರು ಉದ್ಘಾಟಿಸಿದರು.

ನಂತರ ಶುಭಾಶಯಗಳು ಕೋರಿದ ಅವರು ಎಲ್ಲಾ ಕಲೆಗಳಿಗೂ ಸಂಗೀತವು ಮೂಲವಾಗಿದ್ದು, ವಾಚನ ಪ್ರಧಾನವಾದ ಗಮಕ ಕಲೆಯು ನಮ್ಮ ಸಂಸ್ಕೃತಿಯನ್ನು ಉಳಿಸಲು ಬಲು ಮುಖ್ಯ ಕಾರಣವಾಗಿದೆ. ಇಂತಹ ಗಮಕ ಕಲೆಯ ಮೂಲಕ ಕನ್ನಡದ ಕಾವ್ಯ ಸಂಪತ್ತನ್ನು ಮನೆ ಮನೆಗೆ ತಲುಪಿಸುವ ಕಾರ್ಯವು ಸ್ತುತ್ಯರ್ಹವಾಗಿದೆ.

ಈ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ನಂತರ ಕುಮಾರವ್ಯಾಸ ವಿರಚಿತ ಕರ್ಣಾಟಕ ಕಥಾಮಂಜರಿಯ ಉದ್ಯೋಗ ಪರ್ವದಿಂದ ಆಯ್ದ ಕೃಷ್ಣತಂತ್ರ ಕಾವ್ಯ ಭಾಗವನ್ನು ವಾಚನ ವ್ಯಾಖ್ಯಾನ ಮಾಡಲಾಯಿತು. ವಾಚನದಲ್ಲಿ ಹಳೆಯ ಮತ್ತು ಹೊಸ ಗಮಕ ಪ್ರತಿಭೆಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಜಯರಾಮ ಕುದ್ರೆತ್ತಾಯರ ಮೊಮ್ಮಕ್ಕಳಾದ ಆರ್ಯ ಹೊಳ್ಳ, ಶ್ರಿಯಾ ಹೊಳ್ಳ, ಆಶ್ರಿತಾ, ವರ್ಷಾ ಕಾರ್ತಿಕ್ ಭಟ್ ಮತ್ತು ಆಹ್ವಾನಿತ ಗಮಕಿಗಳಾದ ಗಮಕಿ ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿ, ಶ್ರೀವಿದ್ಯಾ ಐತಾಳ್ ಉಜಿರೆ ಪಾಲ್ಗೊಂಡರು.

ವ್ಯಾಖ್ಯಾನವನ್ನು ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ನಡೆಸಿದರು.

ಕಾರ್ಯಕ್ರಮದಲ್ಲಿ ಪರಿಷತ್ತಿನ ಉಪಾಧ್ಯಕ್ಷ ರಾಮಕೃಷ್ಣ ಭಟ್ ಬೆಳಾಲು ಮತ್ತು ರಮೇಶ್ ಮಯ್ಯ, ಪರಿಷತ್ತಿನ ಪೂರ್ವಾಧ್ಯಕ್ಷ ಸುರೇಶ್ ಕುದ್ರೆಂತಾಯ, ಎ.ಡಿ. ಸುರೇಶ್, ಸಂಗೀತ ಶಿಕ್ಷಕರು ಬೆಳ್ತಂಗಡಿ, ಹವ್ಯಾಸಿ ಯಕ್ಷಗಾನ ಅರ್ಥದಾರಿಗಳಾದ ಹರಿದಾಸ ಗಾಂಭೀರ್, ಮನೆಯವರು ಬಂಧು ಬಳಗದವರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here