ಕಣಿಯೂರು: ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 40 ವರ್ಷಗಳಿಂದ ಸೇವೆ ಸಲ್ಲಿಸಿ, ಇದೀಗ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವಾ ನಿವೃತ್ತಿ ಹೊಂದುತ್ತಿರುವ ರಘುಪತಿ ಕೆ. ಇವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ಏ.30ರಂದು ಸಂಘದ ಸಭಾಂಗಣದಲ್ಲಿ ಜರುಗಿತು.
ಸಾಯಂಕಾಲ ಭಜನೆ, ಕರಾವಳಿಯ ಗಂಡು ಕಲೆ ಯಕ್ಷಗಾನದ ಮೇಲೆ ಅಪಾರ ಅಭಿಮಾನದ ಪ್ರಯುಕ್ತ ಹನುಮಗಿರಿ ಮೇಳದ ಶುಕ್ರನಂದನೆ ಯಕ್ಷಗಾನ ಬಯಲಾಟವನ್ನು ರಘುಪತಿಯವರು ನಡೆಸಿಕೊಟ್ಟರು.
ಸಂಘದ ಉಪಾಧ್ಯಕ್ಷ ಅಶೋಕ್, ನಿರ್ದೇಶಕರಾದ ರಾಜೀವ ರೈ ಎ.ಬಿ., ಉದಯ್ ಭಟ್ ಕೆ, ಉದಯ್ ಬಿ.ಕೆ., ನಾರಾಯಣ ಗೌಡ, ರಾಮಣ್ಣ ಮಡಿವಾಳ, ಪಿಜಿನ ಮುಗೇರ, ಶೀಲಾವತಿ, ವಿನಯಶ್ರೀ, ದಿನೇಶ್ ನಾಯ್ಕ, ಕೇಶವ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹಲವು ಜವಾಬ್ದಾರಿ ನಿರ್ವಹಣೆ: ಬಂದಾರು ಗ್ರಾಮದ ಅನಾಬೆಯ ನಾರಾಯಣ್ ಭಟ್ – ಸುಬ್ಬಮ್ಮ ದಂಪತಿಯ ಪುತ್ರನಾಗಿ 1964ರ ಏ.27ರಂದು ಜನಿಸಿದ ರಘುಪತಿಯವರು ಮೈರೋಳ್ತಡ್ಕ, ಪದ್ಮುಂಜ, ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಓದಿದ್ದರು. ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ಪಿಗ್ಮಿ ಏಜೆಂಟ್, ಮಾರಾಟಗಾರ, ಲೆಕ್ಕಿಗ ಸಹಿತ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಇವರು, 2022ರ ಜೂ.1ರಂದು ಪದೋನ್ನತಿ ಹೊಂದಿ ಸಂಘದ ಸಿಇಒ ಆಗಿದ್ದರು. ಬಾಲ್ಯದಲ್ಲೇ ಯಕ್ಷಗಾನದ ಮೇಲೆ ಅಪಾರ ಪ್ರೀತಿ ಇದ್ದು, ಹವ್ಯಾಸಿ ನಾಟಕ, ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಪತ್ನಿ ಮಮತಾ, ಮಕ್ಕಳಾದ ಶ್ರೀವತ್ಸ, ಶ್ರೀಕೃಪಾರೊಂದಿಗೆ ಮೈರೋಳ್ತಡ್ಕದಲ್ಲಿ ನೆಲೆಸಿದ್ದಾರೆ.
ಮುಂದೆ ಕೃಷಿ ಮಾಡುವೆ: ಸೇವಾ ನಿವೃತ್ತಿಗೊಂಡ ಪದ್ಮುಂಜ ಪ್ಯಾಕ್ಸ್ ಸಿಇಒ ರಘುಪತಿ ಕೆ. ಸುದ್ದಿ ಬಿಡುಗಡೆ ಪತ್ರಿಕೆಯೊಂದಿಗೆ ಮಾತನಾಡಿ, ಸುದೀರ್ಘ 40 ವರ್ಷಗಳ ಕಾಲ ಆಡಳಿತ ಮಂಡಳಿ, ಗ್ರಾಹಕರು, ಸಿಬ್ಬಂದಿಯ ಸಹಕಾರದಿಂದ ಉತ್ತಮವಾಗಿ ಸೇವೆ ಸಲ್ಲಿಸಲು ಸಹಕಾರಿಯಾಗಿದೆ. ನಿವೃತ್ತಿಯ ಬಳಿಕ ಕೃಷಿ ಕ್ಷೇತ್ರದಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ಸುದ್ದಿ ಬಿಡುಗಡೆ ಪತ್ರಿಕೆಯೊಂದಿಗೆ ಮಾತನಾಡಿದ ಪದ್ಮುಂಜ ಪ್ಯಾಕ್ಸ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಸಿಇಒ ರಘುಪತಿ ರವರ ಉತ್ತಮ ವ್ಯಕ್ತಿತ್ವದಿಂದ ಎಲ್ಲರೊಂದಿಗೆ ಬೆರೆತು ಗ್ರಾಹಕರಿಗೆ ಸೇವೆ ಸಲ್ಲಿಸಿದ್ದಾರೆ. ರಘುಪತಿಯವರು ಸಂಘದ ಅಭಿವೃದ್ಧಿಯಲ್ಲಿ ಉತ್ತಮ ಪಾತ್ರ ನಿರ್ವಹಿಸಿದ್ದು, ಸಿಬ್ಬಂದಿಯೊಂದಿಗೆ ಆತ್ಮೀಯತೆ, ಆಡಳಿತ ಮಂಡಳಿ ಜತೆ ಉತ್ತಮ ಸಂಬಂಧ ಹೊಂದಿದ್ದರು. ಈಗ 40 ವರ್ಷ 8 ತಿಂಗಳು ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಳ್ಳುತ್ತಿದ್ದಾರೆ. ಇಂದು ತಮ್ಮ ಯಕ್ಷಗಾನದ ಮೇಲಿನ ಅಪಾರ ಅಭಿಮಾನದಿಂದ ಬಯಲಾಟ ನಡೆಸಿಕೊಟ್ಟಿದ್ದಾರೆ ಎಂದು ರಕ್ಷಿತ್ ಪಣೆಕ್ಕರ ಹೇಳಿದರು.