ಧರ್ಮಸ್ಥಳದಲ್ಲಿ ಮಕ್ಕಳಿಗೆ ಅಭಿನಯ ಪ್ರಧಾನ ರಂಗಶಿಬಿರ- ಹೇಮಾವತಿ ಹೆಗ್ಗಡೆ ಮಾರ್ಗದರ್ಶನದಲ್ಲಿ ರಂಗಶಿವ ಕಲಾಬಳಗದಿಂದ ‘ನಲಿಯೋಣು ಬಾ’ ಕಾರ್ಯಕ್ರಮ

0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ರಂಗಶಿವ ಕಲಾಬಳಗದಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಮೂರನೇ ವರ್ಷದ 10 ದಿನಗಳ ಬೇಸಿಗೆ ಶಿಬಿರ ‘ನಲಿಯೋಣು ಬಾ’ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಏ.18ರಂದು ಉದ್ಘಾಟನೆಗೊಂಡಿದೆ.

ಧರ್ಮಾಧಿಕಾರಿ ಡಾ||ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ, ಹೇಮಾವತಿ ವೀ. ಹೆಗ್ಗಡೆಯವರ ಪರಿಕಲ್ಪನೆ ಹಾಗೂ ಡಿ.ಹರ್ಷೇಂದ್ರ ಕುಮಾರ್ – ಸುಪ್ರಿಯಾ ಹರ್ಷೇಂದ್ರ ಕುಮಾರ್ ಸಹಕಾರದೊಂದಿಗೆ ‘ರಂಗಶಿವ’ ಕಲಾಬಳಗದ ಸಂಯೋಜನೆಯೊಂದಿಗೆ 2022ರಲ್ಲಿ ಪ್ರಥಮ ಬಾರಿಗೆ ಉಚಿತ ಬೇಸಿಗೆ ಶಿಬಿರವನ್ನು ಆರಂಭಿಸಲಾಗಿತ್ತು.

ವ್ಯಕ್ತಿತ್ವ ವಿಕಸನಕ್ಕೆ ಮಾರ್ಗ: ಮಕ್ಕಳೊಂದಿಗೆ ದೀಪ ಬೆಳಗಿಸಿ ಗಿಡಕ್ಕೆ ನೀರುಣಿಸುವುದರೊಂದಿಗೆ ಶಿಬಿರವನ್ನು ಸುಪ್ರಿಯಾ ಹರ್ಷೇಂದ್ರಕುಮಾರ್ ಉದ್ಘಾಟಿಸಿದರು. ಶಿಬಿರದಲ್ಲಿ ಮುಕ್ತವಾಗಿ ಬೆರೆತು ತಮ್ಮಲ್ಲಿರುವ ಕಲೆ, ಸುಪ್ತ ಪ್ರತಿಭೆಗಳ ಅಭಿವ್ಯಕ್ತಿಯೊಂದಿಗೆ ಸೃಜನಶೀಲ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಕಿವಿಮಾತು ಹೇಳಿದರು.

ಮಕ್ಕಳು ರಜೆಯನ್ನು ಅತ್ಯಂತ ಸುಂದರವಾಗಿ ಆನಂದಿಸಬೇಕು. ಹಿಂದಿನ ಕಾಲದಲ್ಲಿ ಮಕ್ಕಳು ಅವಿಭಕ್ತ ಕುಟುಂಬದಲ್ಲಿ ಇದ್ದುದರಿಂದ ಹೊರಾಂಗಣ ಆಟೋಟಗಳಲ್ಲಿ ಭಾಗವಹಿಸಿ ಆನಂದಿಸುತ್ತಿದ್ದರು. ಈಗಿನ ಮಕ್ಕಳು ಮೊಬೈಲ್‌, ಟಿವಿಗೆ ಸೀಮಿತರಾಗಿದ್ದು, ಜನಪ್ರಿಯ ಚಲನಚಿತ್ರ ನಟನಟಿಯರ ಜೀವನ ಶೈಲಿ ಅನುಕರಿಸುವಲ್ಲಿ ತಲ್ಲೀನರಾಗಿರುತ್ತಾರೆ. ನೆಂಟರಿಷ್ಟರ ಪರಿಚಯವೇ ಇಲ್ಲದಂತಾಗಿದೆ. ಹಿಂದಿನ ಚಲನಚಿತ್ರಗಳ ಸಾಹಿತ್ಯ ಅರ್ಥಪೂರ್ಣವಾಗಿರುತ್ತಿತ್ತು. ಈಗಿನ ಚಿತ್ರದ ಸಾಹಿತ್ಯಗಳಿಗೆ ಮಕ್ಕಳು ದಾಸರಾಗದೆ, ಭಕ್ತಿಗೀತೆ, ಭಾವಗೀತೆ, ಹಾಡು, ಕಥೆ, ಕಾದಂಬರಿ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ, ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡುವ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೊಮ್ಮನಹಳ್ಳಿಯ ಕಿಂದರಿಜೋಗಿ ನಾಟಕ: ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಈ ಬಾರಿ ಶಿಬಿರದಲ್ಲಿ ಅಭಿನಯ ಪ್ರಧಾನ ರಂಗಶಿಬಿರ ಏರ್ಪಡಿಸಲಾಗಿದೆ. ಇದಕ್ಕಾಗಿ ಈಗಾಗಲೇ ಕುವೆಂಪು ರಚಿಸಿದ ಬೊಮ್ಮನಹಳ್ಳಿಯ ಕಿಂದರಿಜೋಗಿ ಪದ್ಯವನ್ನು ಹೇಮಾವತಿ ಅಮ್ಮನವರು ನಾಟಕವನ್ನಾಗಿ ರಚಿಸಿದ್ದು, ಮಕ್ಕಳಿಗೆ ಕಲಿಸುವಂತೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಪ್ರಾಸ್ತಾವಿಕ ಮಾತನಾಡಿದ ರಂಗಶಿವ ಕಲಾಬಳಗದ ಅಧ್ಯಕ್ಷ ರಾಜೇಂದ್ರದಾಸ್ ತಿಳಿಸಿದರು.

ಸಂದೇಶ್ ಕಾರ್ಯಕ್ರಮ ನಿರೂಪಿಸಿದರು, ಸುನೀಲ್ ಶೆಟ್ಟಿ ವಂದಿಸಿದರು.

ಮಕ್ಕಳೊಂದಿಗೆ ಬೆರೆತ ಹೇಮಾವತಿ ಹೆಗ್ಗಡೆ: ಶಿಬಿರದಲ್ಲಿ 40ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದಾರೆ. ಹೇಮಾವತಿ ವೀ. ಹೆಗ್ಗಡೆಯವರು ನಿರಂತರವಾಗಿ ಭೇಟಿ ನೀಡುತ್ತಾ, ಮಕ್ಕಳೊಂದಿಗೆ ಬೆರೆಯುತ್ತಿದ್ದಾರೆ. ತಮ್ಮ ಬಾಲ್ಯದ ಅನುಭವಗಳನ್ನು ಅಜ್ಜಿಮನೆಯಲ್ಲಿ ಕಳೆಯುತ್ತಿದ್ದ ಸಂದರ್ಭವನ್ನು ಅತ್ಯಂತ ಸುಂದರವಾಗಿ, ಮಕ್ಕಳಿಗೆ ಅರ್ಥಪೂರ್ಣವಾಗಿ, ಮನಮುಟ್ಟುವಂತೆ ವಿವರಿಸಿದ್ದಾರೆ. ಲಗೋರಿ ಹಾಗೂ ಬೇರೆ ಬೇರೆ ಆಟಗಳನ್ನು ಆಡುತ್ತಿದ್ದ ಬಗೆಗಳು, ಹಿರಿಯರೊಂದಿಗೆ ಕಿರಿಯರೊಂದಿಗೆ ಪ್ರೀತಿವಿಶ್ವಾಸದಿಂದ ಬೆರೆತ ಅನುಭದ ಕ್ಷಣಗಳನ್ನು ಮಕ್ಕಳೊಂದಿಗೆ ಹಂಚಿಕೊಂಡಿದ್ದಾರೆ.

ಮಕ್ಕಳಿಂದ ನಾಟಕ ಪ್ರದರ್ಶನ: ಕ್ರಾಫ್ಟ್, ನೃತ್ಯ, ಹಾಡುಗಾರಿಕೆ ಮತ್ತಿತರ ವಿಷಯಗಳು ಶಾಲೆ ಅಥವಾ ಇತರ ಶಿಬಿರಗಳಲ್ಲಿ ಮಕ್ಕಳಿಗೆ ಸಾಮಾನ್ಯವಾಗಿ ಸಿಗುತ್ತದೆ. ನಮ್ಮ ಶಿಬಿರದಲ್ಲಿ ಈ ಬಾರಿ ರಂಗ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ. ರಂಗಗೀತೆ, ಜನಪದ ಗೀತೆ, ರಂಗ ಆಟಗಳು, ಅಭಿನಯಕ್ಕೆ ಸಂಬಂಧಪಟ್ಟ ಆಟಗಳು, ಜನಪದ ಆಟಗಳು ಹೀಗೆ ಅಭಿನಯ ಪ್ರಧಾನವಾಗಿ ಮಕ್ಕಳನ್ನು ರಂಗಚಟುವಟಿಕೆಗಳಿಗೆ ಸಜ್ಜುಗೊಳಿಸುವ ಕಾರ್ಯ ಮಾಡುತ್ತಿದ್ದೇವೆ. ಮಕ್ಕಳಿಗೆ ಬೊಮ್ಮನಹಳ್ಳಿಯ ಕಿಂದರಿಜೋಗಿ ನಾಟಕ ತರಬೇತಿ ನೀಡಲಾಗುತ್ತಿದ್ದು, ಶಿಬಿರ ಮುಗಿಯುವ ಮೊದಲು ಪ್ರದರ್ಶನ ನೀಡಲಾಗುವುದು ಎಂದು ಶಿಬಿರದ ನಿರ್ದೇಶಕ ನೀನಾಸಂ ಪದವೀಧರ ಸುನೀಲ್ ಶೆಟ್ಟಿ ಕಲ್ಕೊಪ್ಪ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here