ನಾವೂರು ಗ್ರಾಮದ ಮೂಲ ನಿವಾಸಿ ಮಲೆಕುಡಿಯ ಸಮುದಾಯದವರಿಂದ ನೋಟಾ ಅಭಿಯಾನಕ್ಕೆ ನಿರ್ಧಾರ

0

ಬೆಳ್ತಂಗಡಿ: ಮೂಲಭೂತ‌ ಸೌಲಭ್ಯಗಳಿಂದ ವಂಚಿತರಾಗಿರುವ ತಾಲೂಕಿನ ನಾವೂರು ಗ್ರಾಮದ ಮೂಲ ನಿವಾಸಿ ಮಲೆಕುಡಿಯ ಸಮುದಾಯದವರು ತಮನ್ನು ಎಲ್ಲ ರಾಜಕೀಯ ಪಕ್ಷಗಳೂ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಈ ಬಾರಿ ನೋಟ ಚಲಾಯಿಸಲು ನಿರ್ಧರಿಸಿದ್ದು ಈ ಬಗ್ಗೆ ತಮ್ಮ ಗ್ರಾಮದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.

ನಾವೂರು ಗ್ರಾಮದ ಅಲ್ಯ, ಪುಳಿತ್ತಡಿ, ಎರ್ಮಲೆ ಮಂಜಲ, ಕುದ್ಕೊಳಿ, ಕಾಸರೋಳಿ ಪರಿಸರದ ಆದಿವಾಸಿ ಕುಟುಂಬಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೋಟಾ ಮತವನ್ನು ಚಲಾಯಿಸುವ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ನಿರ್ಧರಿಸಿದ್ದಾರೆ.

ಈ ಪರಿಸರದಲ್ಲಿ 22 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳು ಜೀವನ ನಡೆಸುತ್ತಿದ್ದು ಸುಮಾರು 100 ಮಂದಿ ಮತದಾರರಿದ್ದಾರೆ‌.ದಶಕಗಳಿಂದ ಈ ಜನರು ತಮ್ಮ ಪ್ರದೇಶಕ್ಕೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಒದಗಿಸುವಂತೆ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

ಆದರೆ ಕುದುರೇಮುಖ ರಾಷ್ಟೀಯ ಉದ್ಯಾನವದ ಒಳಗಿರುವ ಈ ಕುಟುಂಬಗಳಿಗೆ ಇನ್ನೂ ಯಾವುದೇ ಮೂಲಭೂತ ಸೌಲಭ್ಯಗಳು ಲಭಿಸಿಲ್ಲ.ಗ್ರಾಮಪಂಚಾಯತಿನಿಂದ ಆರಂಭಿಸಿ ಪ್ರಧಾನಿಯವರೆಗೆ ಎಲ್ಲರಿಗೂ ಇಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದ್ದಾರೆ.ತಮ್ಮ ಬೇಡಿಕೆಗಳಿಗೆ ಯಾವ ರಾಜಕೀಯ ಪಕ್ಷಗಳೂ ಸರಕಾರಗಳೂ ಸ್ಪಂದಿಸಲಿಲ್ಲ ಎಂಬುದು ಇಲ್ಲಿನ ಜನರ ಆರೋಪವಾಗಿದೆ.ಪುಳಿತ್ತಡಿ ಪರಿಸರದಲ್ಲಿ ಇನ್ನೂ ಕರೆಂಟ್ ಬಂದಿಲ್ಲ ಆದರೆ ಅವರ ಮನೆಗಳಲ್ಲೆಲ್ಲ ವಿದ್ಯುತ್ ಮೀಟರ್ ಅಳವಡಿಸಲಾಗಿದೆ.

ಮೀಟರ್ ಅಳವಡಿಸಿ ಆರು ವರ್ಷಗಳೇ ಕಳೆದಿದೆ ಎನ್ನುತ್ತಾರೆ ಇಲ್ಲಿನ ಜನರು. 2017ರ ವೇಳೆಗೆ ಏಕಾಏಕಿ ಗುತ್ತಿಗೆದಾರರು ಬಂದು ಇವರ ಮನೆಗಳಿಗೆ ಮೀಟರ್ ಅಳವಡಿಸಿದ್ದರು.ಆದರೆ ಮತ್ತೆ ಯಾರೂ ಇತ್ತ ತಿರುಗಿ ನೋಡಿಲ್ಲ.

ಅರಣ್ಯದ ನಡುವೆ ವಾಸಿಸುತ್ತಿರುವ ಈ ಜನರಿಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಕತ್ತಲಾದಮೇಲೆ ಇವರ ಬದುಕೇ ದುಸ್ತರ, ಕೃಷಿಗೆ ನೀರುಣಿಸಲೂ ಸಾಧ್ಯವಾಗದೆ ಇವರು ಸಂಕಷ್ಟದಲ್ಲಿದ್ದಾರೆ.

ಮೆಸ್ಕಾಂ ಅಧಿಕಾರಿಗಳು ಇಲ್ಲಿಗೆ ವಿದ್ಯುತ್ ಒದಗಿಸಲು ಈ ಬಗ್ಗೆ ಸರ್ವೆ ನಡೆಸಿದ್ದು 2017ರಲ್ಲಿ 46,81,398 ರೂಗಳ ಅಂದಾಜುಪಟ್ಟಿ ತಯಾರಿಸಿದ್ದರು.

ಇದಕ್ಕೆ ಅರಣ್ಯ ಇಲಾಖೆಯ ಅನುಮೋದನೆ ಪಡೆಯಲು ನಿಗದಿತ ನಮುನೆಯಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದೆ.

ಆದರೆ ಈ ಆನ್ ಲೈನ್ ಅರ್ಜಿ ಏನಾಗಿದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ.

LEAVE A REPLY

Please enter your comment!
Please enter your name here