ಮಳೆಯಿಂದಾಗಿ ಕೆಸರು ಗದ್ದೆಯಾದ ನಿಡಿಗಲ್-ಮುಂಡಾಜೆ ರಸ್ತೆ: ಪ್ರಯಾಣಿಕರಿಗೆ ನರಕ ದರ್ಶನ

0

ಬೆಳ್ತಂಗಡಿ: ಮೊದಲೆರಡು ಮಳೆ ಬಿದ್ದಾಗಲೇ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಉಜಿರೆ-ಮುಂಡಾಜೆ ರಸ್ತೆಯಲ್ಲಿ ವಾಹನಗಳು ಸಾಗದ ದುಸ್ಥಿತಿ ನಿರ್ಮಾಣಗೊಂಡಿದೆ.ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಅಲ್ಲಲ್ಲಿ ರಸ್ತೆಯನ್ನು ಅಗೆದು ಹಾಕಿರುವುದರಿಂದ ಮಡಂತ್ಯಾರು, ಬೆಳ್ತಂಗಡಿ, ಉಜಿರೆ ಸಹಿತ ಹಲವು ಕಡೆಗಳಲ್ಲಿ ವಾಹನಗಳು ಕಷ್ಟಪಟ್ಟು ಸಾಗುತ್ತಿವೆ.ಅದರಲ್ಲೂ ನಿಡಿಗಲ್‌ನಿಂದ ಮುಂಡಾಜೆಯವರೆಗೆ ವಾಹನಗಳು ಸಾಗಲು ಹರಸಾಹಸ ಪಡಬೇಕಿದೆ.

ಮಣ್ಣಿನ ರಸ್ತೆಯಲ್ಲಿ ವಾಹನಗಳು ಸ್ಕಿಡ್: ನಿಡಿಗಲ್‌ನಿಂದ ಮುಂಡಾಜೆಯವರೆಗೆ ಕೆಲವು ಕಡೆ ಮಾತ್ರ ಜಲ್ಲಿಕಲ್ಲು ಹಾಸಲಾಗಿದೆ. ಹೆಚ್ಚಿನ ಕಡೆ ಇದ್ದ ರಸ್ತೆಯನ್ನು ಅಗೆದು, ಸಮತಟ್ಟು ಮಾಡಲಾಗಿದ್ದು, ಮಣ್ಣಿನ ರಸ್ತೆಯಲ್ಲೇ ವಾಹನಗಳು ಕೆಲವು ವಾರಗಳಿಂದ ಸಂಚರಿಸುತ್ತಿದ್ದವು. ಮೊನ್ನೆ ಶನಿವಾರ ಮಳೆ‌ ಬಂದಾಗ ಈ ಮಣ್ಣಿನ ರಸ್ತೆಯಲ್ಲಿ ವಾಹನಗಳು ಪರದಾಟ ನಡೆಸಿದ್ದವು. ಈಗ ಶುಕ್ರವಾರ ಏ.19 ರಂದು ಸಂಜೆ ಸುರಿದ ಮಳೆಗೆ ಮತ್ತೆ ವಾಹನಗಳಿಗೆ ನರಕ ದರ್ಶನವಾಗಿದೆ.ಮಣ್ಣಿನ ರಸ್ತೆ ಕೆಸರು ಮಯವಾಗಿದ್ದು, ಕಾರು ಮತ್ತಿತರ ವಾಹನಗಳೂ ಸ್ಕಿಡ್ ಆಗುತ್ತಿವೆ. ಅಲ್ಲಲ್ಲಿ ಬೈಕ್, ಸ್ಕೂಟರ್‌ಗಳು ಬಿದ್ದು, ಸವಾರರು ಗಾಯಗೊಳ್ಳುತ್ತಿದ್ದಾರೆ.

ಕೆಸರು ರಸ್ತೆಯಲ್ಲಿ ಪಾದಚಾರಿಗೂ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರಿಂದ ಹೆದ್ದಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.ಟ್ರಾಫಿಕ್ ಜಾಮ್:ಕೆಸರುಗದ್ದೆಯಂತಾಗಿರುವ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಸಂಚರಿಸಲಾಗದೆ ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಶುಕ್ರವಾರ ರಾತ್ರಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಚಾಲಕರು ಹಿಡಿಶಾಪ ಹಾಕುತ್ತಿದ್ದರು.

ಈ ನಡುವೆ, ಮಂಗಳೂರಿಗೆ ತೆರಳುವ ಕೆ‌ಎಸ್‌ಆರ್‌ಟಿಸಿ ಬಸ್ಸೊಂದು ಕೆಟ್ಟು ನಿಂತ ಕಾರಣ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಬಣಿಸಿತ್ತು. ಕೊನೆಗೆ ಪ್ರಯಾಣಿಕರೇ ಸೇರಿ ಬಸ್ಸನ್ನು ತಳ್ಳಿ ಮುಂದಕ್ಕೆ ಸಾಗಿಸಿದ್ದರಿಂದ ಕೆಲತಾಸುಗಳ ಟ್ರಾಫಿಕ್ ಜಾಮ್ ಅಂತ್ಯ ಕಂಡಿದೆ.ಸಮಸ್ಯೆ ಪರಿಹಾರಕ್ಕೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ರಸ್ತೆ ಕಾಮಗಾರಿಯ ಗುತ್ತಿಗೆದಾರರು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.

LEAVE A REPLY

Please enter your comment!
Please enter your name here