ಬೆಳ್ತಂಗಡಿ: ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂಬ ವಿವಾದಿತ ಹೇಳಿಕೆ ನೀಡಿದ್ದು ಇದನ್ನು ಮಹಿಳಾ ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಮತ್ತು ಅವರು ನಾಡಿನ ಸಮಸ್ತ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ಹೇಳಿದರು.
ಅವರು ಎ.15ರಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸರಕಾರದ ಗ್ಯಾರಂಟಿ ಯೋಜನೆಯ ಗೃಹ ಲಕ್ಷ್ಮಿ ಹಣದಿಂದ ಮಹಿಳೆಯರು ತಮ್ಮ ಕುಟುಂಬಕ್ಕೆ ಟಿ ವಿ ಖರೀದಿಸಿದ್ದು, ಫ್ರಿಡ್ಜ್ ಖರೀದಿಸುವುದು, ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವುದು ದುಡಿವ ಮಗನನ್ನು
ಕಳೆದುಕೊಂಡ ವೃದ್ಧೆ ಗೃಹ ಲಕ್ಷ್ಮಿ ಹಣದಿಂದ ಜೀವನ ಸಾಗಿಸುವುದು, ಔಷಧ ಖರೀದಿಸುವುದು ಇದೆಲ್ಲ ದಾರಿ ತಪ್ಪಿದಂತೆಯ ಎಂದು ಪ್ರಶ್ನಿಸಿದರು.
ಮಹಿಳೆಯರು ಅತ್ಯಂತ ಹೆಚ್ಚು ಜವಾಬ್ದಾರಿ ಇರುವವರು, ಕುಟುಂಬದ ಸುಧಾರಣೆಗೆ ಶ್ರಮಿಸುವವರು ತಮ್ಮ ಕೈ ಸೇರುವ ಹಣವನ್ನು ಸಂಸಾರರ ಉದ್ದಾರಕ್ಕೆ ಬಳಸುತ್ತಾರೆ ವೆಸ್ಟ್ ಎಂಡ್ ವಾಸ್ತವ್ಯ, ರೇಂಜ್ ರೋವರ್ ಓಡಾಟ, ಊರು ತುಂಬಾ ಮನೆ ಹೊಂದಿರುವ ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿಯವರಿಗೆ ಹೆಣ್ಣು ಮಕ್ಕಳ ತ್ಯಾಗ ಹೇಗೆ ಅರ್ಥವಾಗುತ್ತದೆ.
ಈ ವಿವಾದಿ ಹೇಳಿಕೆ ನೀಡಿರುವ ಇವರು ಮಹಿಳೆಯ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷೆ ನಮಿತಾ ಕೆ. ಪೂಜಾರಿ, ಮಹಿಳಾ ಬ್ಲಾಕ್ ಗ್ರಾಮೀಣ ಅಧ್ಯಕ್ಷೆ ವಂದನಾ ಭಂಡಾರಿ, ಅಕ್ರಮ ಸಕ್ರಮ ತಾಲೂಕು ಸದಸ್ಯೆ ವಿನುತಾ ರಜತ್ ಗೌಡ, ಆರಾಧನಾ ಸಮಿತಿ ಸದಸ್ಯೆ ಜಯಶೀಲಾ ಕುಶಾಲಪ್ಪ ಗೌಡ, ತಾ.ಪ. ಮಾಜಿ ಸದಸ್ಯೆ ಉಷಾ ಶರತ್, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಸೌಮ್ಯ ಲಾಯಿಲ, ಮೆರಿಟಾ ಪಿಂಟೊ, ಪುಷ್ಪಾ ಬಾಂದಡ್ಕ ಉಪಸ್ಥಿತರಿದ್ದರು.