ರಾಜಂಶದ ಸ್ಥಾಪನೆಯೊಂದಿಗೆ ನಿರ್ಮಾಣವಾದ ದೇವಾಲಯ: ಕೊಲ್ಲಿ ಶ್ರೀ ದುರ್ಗಾ ದೇವಾಲಯ

0

ಬೆಳ್ತಂಗಡಿ: ಪುತ್ತೂರು ಸಹಿತವಾಗಿ ಪಶ್ಚಿಮ ಘಟ್ಟಗಳ ಬುಡದಿಂದ ಪಶ್ಚಿಮದ ಅರಬೀಸಮುದ್ರರವರೆಗೆ ವಿಸ್ತಾರವಾಗಿ ಹಬ್ಬಿದ್ದ ರಾಜ್ಯವೇ ಬಂಗರ ರಾಜ್ಯ. ಇಂದು ಕ್ರಿ.ಶ. 1157ರಲ್ಲಿ ಒಂದನೇ ವೀರನರಸಿಂಹ ಬಂಗರಾಜನಿಂದ ಸ್ಥಾಪಿಸಲ್ಪಟ್ಟಿತ್ತು. ಅವನ ರಾಜ್ಯದ ಉತ್ತರ ಭಾಗದಲ್ಲಿ ವಿಶೇಷ ಸಾನಿಧ್ಯ ಹೊಂದಿದ್ದ ಕೊಲ್ಲಿ ಎಂಬಲ್ಲಿ ಅದೇ ವರ್ಷ ಆತ ಕೊಲ್ಲಿ ಶ್ರೀ ದುರ್ಗಾ ದೇವಿ ದೇವಾಲಯವನ್ನು ನಿರ್ಮಿಸಿದ್ದ. ಈಗ ಅದರ ಜೀರ್ಣೋದ್ಧಾರವಾಗುತ್ತಿದೆ ಎಂದು ಖ್ಯಾತ ಇತಿಹಾಸಕಾರ ಪುತ್ತೂರಿನ ಡಾ.ವೈ.ಉಮಾನಾಥ ಶೆಣೈಯವರು ಹೇಳಿದರು. ಅವರು ಕೊಲ್ಲಿ ದೇವಾಲಯದ ಜೀಣೋದ್ಧಾರಕ್ಕೆ ಸಂಬಂಧಪಟ್ಟ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಇಲ್ಲಿನ ಐತಿಹಾಸಿಕ ಹಿನ್ನಲೆಯ ಬಗ್ಗೆ ಉಪನ್ಯಾಸ ನೀಡಿದರು.

ಮೈಸೂರು ಬಳಿಯ ಗಂಗವಾಡಿಯಲ್ಲಿ ಆಳುತ್ತಿದ್ದ ಈ ಬಂಗ ಅರಸು ಮನೆತನದವರು ಹೊಯ್ಸಳ ಮಹಾರಾಜ ವಿಷ್ಣು ವರ್ಧನನಿಂದ ಕ್ರಿ.ಶ 1151ರ ಸುಮಾರಿಗೆ ಸೋಲಿಸಲ್ಪಟ್ಟಿದ್ದರು. ರಾಜನಾಗಿದ್ದ ಚಂದ್ರಶೇಖರನು ಯುದ್ಧದಲ್ಲಿ ಕೊಲ್ಲಲ್ಪಟ್ಟನು.ನಿರ್ಗತಿಕವಾದ ಈ ರಾಜ ಕುಟುಂಬವು ರಕ್ಷಣೆಗಾಗಿ ಅಲೆಯುತ್ತಾ ಕೊನೆಗೆ, ಪಶ್ಚಿಮ ಘಟ್ಟದ ಕಾಡಿನಲ್ಲಿ ಈಗ ಬಂಗರ ಫಲ್ಕೆ ಎಂದು ಕರೆಯಲ್ಪಡುವ ಸ್ಥಳದಲ್ಲಿ ನೆಲೆಯಾದರು. ಇದನ್ನು ತಿಳಿದ ವಿಷ್ಣುವರ್ಧನನ ಮಗ ಪ್ರಜಾವತ್ಸಲರಾಜ 1ನೇ ನರಸಿಂಹನು ಅವರನ್ನು ಭೇಟಿಯಾಗಿ ಬದುಕಿ ಉಳಿದಿದ್ದ ರಾಜಕುಮಾರನನ್ನು ಸಂತೈಸಿದನು. ಪಶ್ಚಿಮ ಘಟ್ಟಗಳಿಂದ ಮಂಗಳೂರಿನವರೆಗೆ ನೇತ್ರಾವತಿ ನದಿಯ ಎರಡೂಕಡೆಗಳಲ್ಲಿ ಹರಡಿರುವ ಪ್ರದೇಶವನ್ನು ಬಂಗರ ರಾಜ್ಯವಾಗಿ ಬಿಟ್ಟುಕೊಟ್ಟ ಹಾಗೂ ರಾಜಕುಮಾರನಿಗೆ ತನ್ನದೇ ಹೆಸರನ್ನು ಕೊಟ್ಟು ಕ್ರಿ.ಶ.1157ರಲ್ಲಿ ಪಟ್ಟಕಟ್ಟಿದನು. ಅಲ್ಲಿಂದ ವೀರನರಸಿಂಹ ಎಂಬುದು ಬಂಗ ಅರಸರ ಪಟ್ಟದ ಹೆಸರಾಯಿತು.

ಕೊಲ್ಲಿ ದುರ್ಗಾಪರಮೇಶ್ವರಿಯ ಬಲಕೈಗಳು ಖಡ್ಗ ಮತ್ತು ತ್ರಿಶೂಲ ಹಾಗೂ ಎಡಕೈಗಳು ಪಾನ ಪಾತ್ರೆ ಮತ್ತು ಡಮರುಗಳನ್ನು ಹೊಂದಿದೆ. ಆದುದರಿಂದ ಇವರನ್ನು ದುರ್ಗಾದೇವಿಯೆಂದೂ ಕರೆಯುತ್ತಾರೆ.
ಇಂದಿನ ಈ ಸಭಾ ಕಾರ್ಯಕ್ರಮದಲ್ಲಿ ದಂತ ವೈದ್ಯ ಡಾ.ದಯಕರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ಶ್ರೀಕಾಂತ ಶೆಟ್ಟಿಯವರು ಧಾರ್ಮಿಕ ಉಪನ್ಯಾಸ ನೀಡಿದರು.

ಶ್ರೀಧರಗೌಡ, ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಗೋಪಾಲ ಕೃಷ್ಣ ಅಡೂರು, ಮಚ್ಚಿಮಲೆ ಅನಂತ ಭಟ್, ವಿಠ್ಠಲ್ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here