ಉಜಿರೆ: ಡಿಜಿಟಲ್ ತಂತ್ರಜ್ಞಾನದ ಎಚ್ಚರ ನಿರ್ವಹಣೆ ಅಗತ್ಯ, ಡಿಜಿಟಲ್ ಯುಗದ ಕ್ಷಿಪ್ರಗತಿಯ ಬೆಳವಣಿಗೆಯೊಂದಿಗೆ ಮುನ್ನಡೆಯುವಾಗ ತಂತ್ರಜ್ಞಾನದ ದುರುಪಯೋಗವಾಗದಂತೆ ಎಚ್ಚರವಹಿಸುವ ಅವಶ್ಯಕತೆಯೂ ಇದೆ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಬಿ.ಎ ಕುಮಾರ ಹೆಗ್ಡೆ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ವಾಣಿಜ್ಯ ಮತ್ತು ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ವಿಭಾಗವು ‘ವಾಣಿಜ್ಯ ಮತ್ತು ನಿರ್ವಹಣಾ ವಲಯದ ಡಿಜಿಟಲ್ ಸ್ಥಿತ್ಯಂತರ’ ಕುರಿತು ಆಯೋಜಿಸಿದ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಿಜಿಟಲ್ ತಂತ್ರಜ್ಞಾನದ ನೆರವಿನೊಂದಿಗೆ ಅಪೂರ್ವ ಅವಕಾಶ ಮತ್ತು ಪ್ರಯೋಜನ ಲಭ್ಯವಾಗುತ್ತಿದೆ. ವಿವಿಧ ವಲಯಗಳಲ್ಲಿ ಹೊಣೆಗಾರಿಕೆಗಳು ವ್ಯವಸ್ಥಿತವಾಗಿ ನಿರ್ವಹಿಸಲ್ಪಡುತ್ತಿವೆ. ಡಿಜಿಟಲ್ ತಂತ್ರಜ್ಞಾನದ ಬಳಕೆಯ ಸಂದರ್ಭದಲ್ಲಿ ವಿಶೇಷ ಮುತುವರ್ಜಿ ವಹಿಸುವುದು ಅಗತ್ಯ ಎಂದರು.
ಇ-ಸಂತೆ ಮಾರುಕಟ್ಟೆಗಳು ರೈತರಿಗೆ ಅನುಕೂಲವಾಗುತ್ತಿವೆ. ಮಧ್ಯವರ್ತಿಗಳ ಕೈನಿಂದ ಬೆಳೆಗಾರ ಪಾರಾಗುವಂತಾಗಿರುವುದು ಆಶಾದಾಯಕವಾಗಿದೆ. ವ್ಯವಸ್ಥಿತ ಡಿಜಿಟಲೀಕರಣದಲ್ಲಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹೋಗುವುದು ಜನರ ಕರ್ತವ್ಯವಾಗಿದೆ ಎಂದರು.
ಕರ್ನಾಟಕ ಬ್ಯಾಂಕ್ ನಿವೃತ್ತ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ ಭಟ್ಟಿ ಎಂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಜಗತ್ತು ಡಿಜಿಟಲೀಕರಣದ ಹಾದಿಯಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದೆ. ಎಲ್ಲಾ ಕ್ಷೇತ್ರದ ಜನರಿಗೂ ಉಪಯುಕ್ತವಾಗುತ್ತಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಡಾ.ಪ್ರಿಯಾ ಕುಮಾರಿ ಎಸ್.ವಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಸುರೇಶ ಬಾಬು ಕೆ.ಎಸ್ ವಂದಿಸಿದರು. ವಿದ್ಯಾರ್ಥಿ ನಯನಶ್ರೀ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ಸಾರಿಕಾ ಉಪಸ್ಥಿತರಿದ್ದರು.