ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮುಂದಿನ ಐದು ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಯ ಒಟ್ಟು 16 ಸ್ಥಾನಗಳ ಪೈಕಿ 15 ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಬಿಜೆಪಿಯ ಹಿರಿಯ ಮುಖಂಡ ಕುಶಾಲಪ್ಪ ಗೌಡ ಪೂವಾಜೆ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿದೆ.
ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಮಾ.3 ಅಂತಿಮ ದಿನವಾಗಿದ್ದು ಒಟ್ಟು 16 ಸ್ಥಾನಗಳ ಪೈಕಿ 15 ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದೆ. ಪುತ್ತೂರಿನಿಂದ ಹಾಲಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸುಳ್ಯದಿಂದ ಎಸ್.ಎನ್ ಮನ್ಮಥ, ಬೆಳ್ತಂಗಡಿಯಿಂದ ಕುಶಾಲಪ್ಪ ಗೌಡ ಪೂವಾಜೆ, ಬಂಟ್ವಾಳದಿಂದ ಟಿ.ಜಿ ರಾಜಾರಾಮ ಭಟ್, ಮಂಗಳೂರಿನಿಂದ ಹಾಲಿ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಭಾಸ್ಕರ ಕೋಟ್ಯಾನ್, ವಾದಿರಾಜ ಶೆಟ್ಟಿ, ವಿನಯ ಕುಮಾರ್ ಸೂರಿಂಜೆ, ಉಡುಪಿಯಿಂದ ದೇವಿಪ್ರಸಾದ್ ಶೆಟ್ಟಿ, ಅಶೋಕ್ ರೈ, ಕುಂದಾಪುರದಿಂದ ರಾಜೀವ ಪೂಜಾರಿ, ಮಹೇಶ್ ಹೆಗ್ಡೆ, ಟಿಎಪಿಟಿಎಂಎಸ್‌ನಿಂದ ಮೋನಪ್ಪ ಶೆಟ್ಟಿ ಎಕ್ಕಾರು, ಕ್ರೆಡಿಟ್ ಸಹಕಾರಿಯಿಂದ ಜಯರಾಜ್ ರೈ ಮಾತ್ರವೇ ನಾಮಪತ್ರ ಸಲ್ಲಿಸಿದ್ದು ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.ಬಾಕಿಯಿರುವ ಇತರ ಕ್ಷೇತ್ರಕ್ಕೆ ಹಾಲಿ ನಿರ್ದೇಶಕ ಪುತ್ತೂರಿನ ಎಸ್.ಬಿ ಜಯರಾಮ ರೈ ಹಾಗೂ ಬಂಟ್ವಾಳ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಾಮಪತ್ರ ಸಲ್ಲಿಸಿದ್ದಾರೆ.
ಈ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆಯೋ ಅಥವಾ ಅವಿರೋಧ ಆಯ್ಕೆ ನಡೆಯಲಿದೆಯೇ ಎಂದು ಕಾದು ನೋಡಬೇಕಿದೆ.