ಬೆಳ್ತಂಗಡಿ: ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾ.2ರಂದು ದ.ಕ.ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ & ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿಯ ಸಹಯೋಗದಲ್ಲಿ ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರಿಗೆ ಒಂದು ದಿನದ ತರಬೇತಿಯನ್ನು ಆಯೋಜಿಸಲಾಗಿತ್ತು.
ಈ ತರಬೇತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮಾತನಾಡಿ ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರಾದ ಪ್ರೌಢಶಾಲೆ , ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಭವಿಷ್ಯದ ಮತದಾರರು ಹಾಗೂ ಯುವ ಮತದಾರರನ್ನು ಜಾಗೃತಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಜೊತೆಗೆ ಪ್ರೇರೇಪಕರಾಗಬೇಕೆಂದು ತಿಳಿಸಿದರು.
ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಯೋಗೇಶ ಹೆಚ್.ಆರ್ ಸ್ವೀಪ್ ತರಬೇತಿಯ ಮುಖ್ಯ ಉದ್ದೇಶ ಹಾಗೂ ಗುರಿಯನ್ನು ತಿಳಿಸುವ ಜೊತೆಗೆ ಯುವ ಮತದಾರರು ನೈತಿಕ ಮತ ಚಲಾಯಿಸುವಂತೆ ಮಾಡುವ ಜವಾಬ್ದಾರಿ ಮತದಾರರ ಸಾಕ್ಷರತಾ ಸಂಘಗಳ ಮೇಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಸಂಪನ್ಮೂಲ ವ್ಯಕ್ತಿಗಳಾದ ದಿವ್ಯಾ ಕುಮಾರಿ, ಶುಭ ಕೆ., ರವಿಕುಮಾರ್ ಬಿ.ಆರ್ ಹಾಗೂ ತಾ.ಪಂ ನ ಜಯಾನಂದ್, ಅಶೋಕ್ ದೇವಾಡಿಗ(PDO ), ತಾಲೂಕಿನ ಪ್ರೌಢಶಾಲಾ ವಿಭಾಗದಿಂದ ಹಿರಿಯರಾದ ಮಹಮ್ಮದ್ ರಿಯಾಜ್, ಪದವಿಪೂರ್ವ ಕಾಲೇಜಿನ ಶುಭ ಪೌಲ್ ಹಾಗೂ ಪದವಿ ಕಾಲೇಜಿನ ಶೇಖರ್ ಕೆ ಇವರು ELC ಸಂಯೋಜಕರ ಪ್ರತಿನಿಧಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.