ಪಡಂಗಡಿ: ದ.ಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬೆಳ್ತಂಗಡಿ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯತ್ ಪಡಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಫೆ.09ರಂದು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ನಡೆಯಿತು.
ಪೊಯ್ಯಗುಡ್ಡೆ ರಿಕ್ಷಾ ತಂಗುದಾಣದಿಂದ ಆರಂಭಿಸಿ ಗ್ರಾಮ ಪಂಚಾಯತ್ ಸಭಾಭವನದವರೆಗೆ ಸಂವಿಧಾನ ಜಾಗೃತಿ ಜಾಥವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರುಗಳು, ಹಾಗೂ ಮಾಜಿ ಸದಸ್ಯರುಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ, ಹಿ.ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ತಾಲೂಕು ಐಇಸಿ ಸಂಯೋಜಕರಾದ ವಿನಿಷ, ಆದಿ ದ್ರಾವಿಡ ಮುಖಂಡರುಗಳು, ಲೇಖಕಿ ಅತ್ರಾಡಿ ಅಮೃತ ಶೆಟ್ಟಿ, ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಪಡಂಗಡಿ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಎಂಬಿಕೆ, ಪದಾಧಿಕಾರಿಗಳು, ಸದಸ್ಯರುಗಳು, ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ಅಧ್ಯಾಪಕರುಗಳು ಮತ್ತು ಮಕ್ಕಳು, ಗ್ರಾಮಸ್ಥರು ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ನ ಸಿಬ್ಬಂದಿ ವರ್ಗದವರು ನಾಡಗೀತೆಯೊಂದಿಗೆ ಪ್ರಾರಂಭಿಸಿ, ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪೂಜಾರಿ ಮತ್ತು ವೇದಿಕೆಯಲ್ಲಿರುವ ಗಣ್ಯರು ದೀಪ ಪ್ರಜ್ವಲನೆಗೈಯುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.
ಪಂಚಾಯತ್ ಕಾರ್ಯದರ್ಶಿ ಸಂವಿಧಾನ ಪೀಠಿಕೆ ಭೋದನೆ ಮಾಡಿದರು, ಸಂವಿಧಾನ ಜಾಗೃತಿ ಕುರಿತು ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಮತ್ತು ಮಂಗಳೂರಿನ ಕಲಾ ತಂಡದಿಂದ ಸಂವಿಧಾನ ಜಾಗೃತಿ ಮೂಡಿಸುವ ಗೀತ ಗಾಯನ ಮತ್ತು ಕಿರು ಪ್ರಹಸನ ಪ್ರದರ್ಶಿಸಲಾಯಿತು.
ಕೊನೆಯಲ್ಲಿ ಪಂಚಾಯತ್ ಕಾರ್ಯದರ್ಶಿಯವರು ಕಾರ್ಯಕ್ರಮ ನಿರೂಪಿಸಿ, ನೆರೆದ ಎಲ್ಲರಿಗೂ ಧನ್ಯವಾದ ಸಮರ್ಪಿಸಿ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.