ಕುಕ್ಕೇಡಿ ಸುಡುಮದ್ದು ಘಟಕದ ಸ್ಫೋಟದಲ್ಲಿ ಕಾರ್ಮಿಕರು ಮೃತಪಟ್ಟ ಪ್ರಕರಣ-ಮತ್ತೋರ್ವ ಆರೋಪಿ ಬಂಧನ-ಪ್ರಮುಖ ಆರೋಪಿ ಪರ ಜಾಮೀನು ಅರ್ಜಿ ಸಲ್ಲಿಸದ ವಕೀಲರು- 2ನೇ ಆರೋಪಿಯ ಜಾಮೀನು ಅರ್ಜಿಗೆ ಎಪಿಪಿ ಆಕ್ಷೇಪ-ಬಂಧಿತ ಮೂವರಿಗೂ ಫೆ.17ರವರೆಗೆ ನ್ಯಾಯಾಂಗ ಬಂಧನ

0

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ಸಮೀಪದ ಕಡ್ತ್ಯಾರ್ ಎಂಬಲ್ಲಿ ಜ.28ರ ಆದಿತ್ಯವಾರದಂದು ಸಂಜೆ 5.30ರ ವೇಳೆಗೆ ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿ ಮೂವರು ಕಾರ್ಮಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿದ್ದ ಕುಕ್ಕೇಡಿ ಸಾಲಿಡ್ ಫಯರ್ ವರ್ಕ್ಸ್‌ನ ಮಾಲಕ ಸಯ್ಯದ್ ಬಶೀರ್(47ವ) ಮತ್ತು ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುತ್ತಿದ್ದ ಹಾಸನ ಜಿಲ್ಲೆಯ ವಡ್ಡರಹಳದಳಿಯ ಕಿರಣ್(24ವ)ರವರನ್ನು ಫೆ.5ರಂದು ಬೆಳ್ತಂಗಡಿಯ ಹೆಚ್ಚುವರಿ ಮತ್ತು ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸ್ಫೋಟ ಸಂಭವಿಸಿ ಕೇರಳದ ತ್ರಿಶೂರ್‌ನ ವರ್ಗೀಸ್(69ವ), ಹಾಸನದ ಅನ್ನನಾಯ್ಕನಹಳ್ಳಿಯ ಚೇತನ್ ಎ.ಯು(24ವ) ಮತ್ತು ಪಾಲಕ್ಕಾಡ್‌ನ ಕೈರಾಡಿ ಕುರುಂಬೂರಿನ ಸ್ವಾಮಿ ಯಾನೆ ನಾರಾಯಣ ಕೆ(56ವ)ರವರು ಮೃತಪಟ್ಟು ಆರು ಮಂದಿ ಕಾರ್ಮಿಕರು ಗಾಯಗೊಂಡ ಘಟನೆಗೆ ಸಂಬಂಧಿಸಿ ಕಡ್ತ್ಯಾರ್ ಚರಡಿಕೆ ನಿವಾಸಿ ಶಾಂತಿ ಮ್ಯಾಥ್ಯೂ(33ವ)ರವರು ನೀಡಿದ ದೂರಿನಂತೆ ಸ್ಫೋಟಕ ತಯಾರಿ ಪರವಾನಿಗೆಯ ಷರತ್ತು ಉಲ್ಲಂಘನೆ, ಸ್ಫೋಟಕ ನಿರ್ವಹಣೆ ವೇಳೆ ನಿರ್ಲಕ್ಷ್ಯ, ವ್ಯಕ್ತಿಗಳ ಸಾವಿಗೆ ಕಾರಣವಾಗುವ ಕೃತ್ಯ ಎಸಗಿದ ಮತ್ತು ಆಸ್ತಿಗೆ ಹಾನಿ ಉಂಟು ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಯಲ್ಲಿದ್ದ ಸಯ್ಯದ್ ಬಶೀರ್ ಮತ್ತು ಕಿರಣ್‌ರವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಪ್ರಮುಖ ಆರೋಪಿ ಸಯ್ಯದ್ ಬಶೀರ್ ಪರ ಮಂಗಳೂರಿನ ಖ್ಯಾತ ವಕೀಲ ಅರುಣ್ ಬಂಗೇರ ಅವರು ಫೆ.೫ರಂದು ಕೋರ್ಟ್‌ಗೆ ಹಾಜರಾಗಿದ್ದರಾದರೂ ಇನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ. ಎರಡನೇ ಆರೋಪಿ ಕಿರಣ್ ಪರ ಬೆಳ್ತಂಗಡಿಯ ನ್ಯಾಯವಾದಿ ಪ್ರಸಾದ್‌ರವರು ಜಾಮೀನು ಅರ್ಜಿ ಸಲ್ಲಿಸಿದರಾದರೂ ಆಕ್ಷೇಪ ಸಲ್ಲಿಸಲು ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಅವರು ಕಾಲಾವಕಾಶ ಕೇಳಿದ್ದರಿಂದ ನ್ಯಾಯಾಧೀಶ ವಿಜಯೇಂದ್ರರವರು ಅರ್ಜಿಯ ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿದರು. ಈ ಮಧ್ಯೆ ಘಟನೆಗೆ ಸಂಬಂಧಿಸಿ ಅನಿಲ್ ದೇವಿಡ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಬಂಧಿತ ಮೂವರಿಗೂ ಫೆ.17ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here