ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ 

0

ಉಜಿರೆ: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ ಜಾತ್ರಾ ಮಹೋತ್ಸವವು ಜ.31 ಮತ್ತು ಫೆ.1ರಂದು ವೇದಮೂರ್ತಿ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತ್ರತ್ವ ಹಾಗು ಪ್ರಧಾನ ಅರ್ಚಕ ಅಶ್ವಿನ್ ಭಟ್ ಅವರ ಪೌರೋಹಿತ್ಯದಲ್ಲಿ  ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಇಂದಬೆಟ್ಟು, ನಾವೂರು, ನಡ ಮತ್ತು ಕನ್ಯಾಡಿ ಗ್ರಾಮಸ್ಥರಿಂದ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಿಸಲ್ಪಟ್ಟಿತು.

ಜ.28 ಮತ್ತು 29ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ವಿಷ್ಣುಸಹಸ್ರನಾಮ ಪಠಣ ನಡೆಯಿತು.ಜ.30ರಂದು ಬೆಳಿಗ್ಗೆ ಶ್ರೀ ದೇವರಿಗೆ ಭಕ್ತಾದಿಗಳಿಂದ ತುಳಸಿ ನಾಮಾರ್ಚನೆ ನಡೆಯಿತು.

ಜ.31ರಂದು  ಬೆಳಿಗ್ಗೆ ಗಣಹೋಮ, ಶ್ರೀ ದೇವರಿಗೆ ಪಂಚ ವಿಂಶತಿ ಕಲಶ, ಗಣಪತಿ  ದೇವರಿಗೆ ನವಕ ಕಲಶ, ನಾಗ ದೇವರಿಗೆ ಕಲಶ, ಪ್ರಸನ್ನ ಪೂಜೆ, ದೇವರಿಗೆ ಕಲಶಾಭಿಷೇಕ, ಪ್ರತಿಷ್ಠ ವರ್ಧಂತ್ಯುತ್ಸವ ನಡೆಯಿತು.ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ ದೇವರ ಉತ್ಸವ ಬಲಿ, ಪ್ರಸಾದ ವಿತರಣೆ, ಫೆ.1ರಂದು ಬೆಳಿಗ್ಗೆ ಗಣಹೋಮ, ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ ಪರಿಸರದ  ವಿವಿಧ ಭಜನಾ ತಂಡಗಳಿಂದ ಕಮ್ಮಟ ಭಜನೋತ್ಸವ ಅತ್ಯಂತ ಯಶಸ್ವಿಯಾಗಿ  ಸಂಪನ್ನಗೊಂಡಿತು.ರಾತ್ರಿ ರಂಗಪೂಜೆ, ಧಾರ್ಮಿಕ ಸಭೆ ಹಾಗು ಅನ್ನಸಂತರ್ಪಣೆ ನಡೆಯಿತು.

ದೈವಾರಾಧನೆಯ ಮಹತ್ವವನ್ನೇ ಪ್ರಧಾನ ಸಂದೇಶವಾಗಿಟ್ಟಿರುವ ಕಲಾಸಂಗಮ ಕಲಾವಿದರಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ  “ಶಿವದೂತೆ ಗುಳಿಗೆ” ನಾಟಕ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿತು.ಊರ ಪರವೂರ ಭಕ್ತರು ಅನ್ನದಾನ ಸೇವೆ ಮಾಡಿಸಿ, ಬಹಳಷ್ಟು ಭಕ್ತರು ಅನ್ಯಾನ್ಯ ಸೇವೆಗಳ ಮೂಲಕ ಸಹಕರಿಸಿ ಆರ್ಥಿಕವಾಗಿಯೂ ಶಕ್ತಿಯನ್ನು ತುಂಬಿರುತ್ತಾರೆ.

ಅನೇಕ ಗಣ್ಯರ ಉಪಸ್ಥಿತಿ, ವಿಶೇಷ ದೀಪಾಲಂಕಾರ, ಗೂಡುದೀಪಗಳು, ಮಕ್ಕಳ ಆಕರ್ಷಣೆಯ ಸಂತೆ ಇತ್ಯಾದಿಗಳು ಜಾತ್ರೆಯ ಸೊಗಡನ್ನು ಹೆಚ್ಚಿಸಿವೆ.ಊರವರ ಪೂರ್ಣ ಸಹಕಾರದಿಂದ  ವರ್ಧಂತ್ಯುತ್ಸವ  ಹಾಗು ಜಾತ್ರಾ ಮಹೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ವೈಭವದಿಂದ ಸುಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here