ಧರ್ಮಸ್ಥಳ: ಭಗವಾನ್ ಬಾಹುಬಲಿಯ 42ನೇ ವರ್ಧಂತ್ಯುತ್ಸವದ ಹಿನ್ನಲೆಯಲ್ಲಿ ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನರಾಗಿರುವ ವೈರಾಗ್ಯಮೂರ್ತಿ ಬಾಹುಬಲಿಗೆ ವಿಶೇಷ ಪಾದಾಭಿಷೇಕ ನೆರವೇರಿತು.
ಎರಡು ದಿನಗಳ ವಿಶೇಷ ಕಾರ್ಯಕ್ರಮ ಫೆಬ್ರವರಿ ಒಂದರಂದು 42 ವರ್ಧಂತಿ ಉತ್ಸವದ ಪ್ರಯುಕ್ತ ತೋರಣ ಮುಹೂರ್ತ, ವಿಮಾನ ಶುದ್ಧಿ, ನಾಂದಿಮಂಗಳ ಪೂಜೆ ಸಂಪನ್ನಗೊಂಡಿತ್ತು.
ವೈಭವದ ಅಗ್ರೋಧಕ ಮೆರವಣಿಗೆ: ಫೆಬ್ರವರಿ 2ನೇ ತಾರೀಕಿನಂದು ಬೆಳಗ್ಗೆ ಅಗ್ರೋದಕ ಮೆರವಣಿಗೆ ಧರ್ಮಸ್ಥಳ ಬೀಡಿನಿಂದ ಬಾಹುಬಲಿಬೆಟ್ಟದವರೆಗೆ ವೈಭವಪೂರ್ಣವಾಗಿ ನೆರವೇರಿತು.
ವಿವಿಧ ಅಭಿಷೇಕಗಳ ಮೂಲಕ ವೈರಾಗ್ಯಮೂರ್ತಿಯ ಆರಾಧನೆ: ಬಾಹುಬಲಿ ಮೂರ್ತಿಗೆ ಆರಂಭದಲ್ಲಿ 216 ಕಲಶಗಳಿಂದ ಬಾಹುಬಲಿಗೆ ಜಲಾಭಿಷೇಕ ನೆರವೇರಿತು.ತದಬಳಿಕ ಎಳನೀರು, ಕಬ್ಬಿನ ಹಾಲು, ಹಾಲು, ಕಲ್ಕಚೂರ್ಣ ಅಭಿಷೇಕ, (ಅಕ್ಕಿ ಹಿಟ್ಟು), ಅರಶಿನ, ಚತುಷ್ಕೋನ ಕುಂಭಾಬಿಷೇಕ, ಅಷ್ಟಗಂಧದ ಅಭಿಷೇಕ, ಶ್ರೀಗಂಧದ ಅಭಿಷೇಕ, ಚಂದನದ ಅಭಿಷೇಕ, ಪೂರ್ಣಕುಂಭಾಭಿಷೇಕ, ಮಂಗಳಾರತಿ, ಮಹಾಶಾಂತಿಮಂತ್ರ ನೆರವೇರಿತು.
ಈ ವಿಶೇಷ ಕಾರ್ಯಕ್ರಮದಲ್ಲಿ 108 ದಿವ್ಯ ಸಾಗರ ಮುನಿ ಮಹಾರಾಜರು, 108 ಆದಿ ಸಾಗರ ಮುನಿಮಹಾರಾಜರು, 108 ನಿರ್ಧೋಷ ಸಾಗರ ಮುನಿಮಹಾರಾಜರು, 105 ಕ್ಷುಲ್ಲಕ ನಿರ್ವಾಣಾ ಸಾಗರ ಮುನಿಮಹಾರಾಜರು, ಕಾರ್ಕಳ ದಾನಶಾಲೆ ಜೈನ ಮಠದ ಸ್ವಸ್ತಿಶ್ರೀ ಲಲಿತಾಕೀರ್ತಿ ಭಟ್ಟಾರಕಪಟ್ಟಾಚಾರ್ಯವರ್ಯ ಮಾಹಾಸ್ವಾಮೀಜಿಯ ಉಪಸ್ಥಿತಿಯಿದ್ದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸುರೇಂದ್ರಕುಮಾರ್ ಸೇರಿದಂತೆ ಹೆಗ್ಗಡೆಯವರ ಕುಟುಂಬಸ್ಥರು, ಅಪಾರ ಸಂಖ್ಯೆಯಲ್ಲಿ ಬಾಹುಬಲಿಯ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾದರು.