ಬೆಳ್ತಂಗಡಿ: ‘ನಮ್ಮಲ್ಲಿ ಉತ್ತಮ ಮೌಲ್ಯಗಳು ಇಲ್ಲವಾದಲ್ಲಿ ಸಾಮಾಜಿಕವಾಗಿ ಪ್ರತಿನಿಧಿಸುವುದು ಕಷ್ಟವಾಗುತ್ತದೆ.ವ್ಯಕ್ತಿಯ ಬದುಕಿನಲ್ಲಿ ಉತ್ತಮ ಮೌಲ್ಯವನ್ನು ರೂಪಿಸುವ ನೆಲೆಯಲ್ಲಿ ಜೆಸಿಐ ಮಾಡುತ್ತಿರುವ ಕಾರ್ಯಗಳು ಶ್ಲಾಘನೀಯವಾದುದು’ ಎಂದು ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಹೇಳಿದರು.
ಅವರು ಜ.28ರಂದು ಬೆಳ್ತಂಗಡಿ ಮಂಜುಶ್ರೀ ಜೆಸಿಐ ವತಿಯಿಂದ ಜೆಸಿ ಭವನದಲ್ಲಿ ನಡೆದ ಜೂನಿಯರ್ ಜೆಸಿ ಪದಗ್ರಹಣ ಹಾಗೂ ಯೂತ್ ಡೇ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.‘ಇಂದು ಯುವ ಸಮುದಾಯಕ್ಕೆ ನೂರಾರು ಅವಕಾಶಗಳಿವೆ.
ಯುವ ಸಮುದಾಯ ದಾರಿ ತಪ್ಪದಂತೆ ಅವರಿಗೆ ಸಾಮಾಜಿಕ ಮೌಲ್ಯ, ಆರ್ಥಿಕ ಮೌಲ್ಯ, ಅಧಿಕಾರದ ಗುಣ, ಸೈದ್ಧಾಂತಿಕ ಗುಣ, ಪ್ರಶ್ನಿಸುವ ಗುಣ ಇದೆಲ್ಲವನ್ನೂ ಬೆಳೆಸಿ ಸಮಾಜದ ಶ್ರೇಷ್ಠ ನಾಗರಿಕನಾಗಿ ಬೆಳೆಸುವ ಕಾರ್ಯವನ್ನು ಜೆಸಿಐ ಸಂಸ್ಥೆ ಮಾಡುತ್ತಿದೆ. ಹಾಗಾಗಿಯೇ ಸಮಾಜದ ಒಂದು ಶ್ರೇಷ್ಠ ಸಂಸ್ಥೆಯಾಗಿ ಜೆಸಿಐ ಬೆಳೆದಿದೆ’ ಎಂದರು.
ಜೆಸಿಐ ವಲಯ 15ರ ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಭರತ್ ಶೆಟ್ಟಿ ಮಾತನಾಡಿ, ‘ಬೆಳ್ತಂಗಡಿ ಮಂಜುಶ್ರೀ ಜೆಸಿಐ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುವ ಅವಕಾಶವನ್ನು ನೀಡುತ್ತಿದೆ. ಹಾಗಾಗಿಯೇ ಹಲವು ಸಾಧಕರ ಕೇಂದ್ರವಾಗಿ ಬೆಳ್ತಂಗಡಿ ಮೂಡಿಬರುತ್ತಿದೆ.ಜೆಸಿಯೊಂದಿಗಿನ ಒಡನಾಟದಿಂದ ನಾವು ತಪ್ಪು ದಾರಿಗೆ ಸಾಗುವುದು ತಪ್ಪುತ್ತದೆ’ ಎಂದರು.
ವಲಯದ ಜ್ಯೂನಿಯರ್ ಜೆಸಿ ವಿಭಾಗದ ನಿರ್ದೇಶಕ ಸ್ವರಾಜ್ ಶೆಟ್ಟಿ ಮಾತನಾಡಿ, ‘ನಾನು ಎಂಬ ಸ್ವಾರ್ಥವನ್ನು ಬಿಟ್ಟು ನಾವು ಎಂಬ ವಿಶಾಲ ಹೃದಯವನ್ನು ಬೆಳೆಸಿಕೊಳ್ಳಬೇಕು.ಜೂನಿಯರ್ ಜೆಸಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಸಿಕ್ಕ ಅವಕಾಶ ಸದ್ಭಳಕೆ ಮಾಡಿಕೊಳ್ಳಬೇಕು’ ಎಂದರು.
ಘಟಕದ ನಿಕಟಪೂರ್ವಾಧ್ಯಕ್ಷ ಹಾಗೂ ವಲಯದ ಉಪಾಧ್ಯಕ್ಷ ಶಂಕರ್ ರಾವ್, ಜೂನಿಯರ್ ಜೆಸಿ ವಿಭಾಗದ ಅಧ್ಯಕ್ಷ ಸಮನ್ವಿತ್ ಕುಮಾರ್ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಜೂನಿಯರ್ ಜೇಸಿ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮನ್ವಿತ್ ಕುಮಾರ್ ವಹಿಸಿ ಜೂನಿಯರ್ ಜೇಸಿಗಳಿಗೆ ಪ್ರಮಾಣವಚನ ಬೋಧಿಸಿದರು.
ಯೂತ್ ಡೇ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷ ರಂಜಿತ್ ಹೆಚ್.ಡಿ. ವಹಿಸಿ ಸ್ವಾಗತಿಸಿದರು.ಸಾಮಾಜಿಕ ಸೇವಾ ಕಾರ್ಯವನ್ನು ಮಾಡುತ್ತಿರುವ ಸಂಘಟನೆಗಳಾದ ಹಿಂದೂ ಯುವ ಶಕ್ತಿ ಆಲಡ್ಕ ಹಾಗೂ ಅಖಿಲ ಕರ್ನಾಟಕ ರಾಜಕೇಸರಿ ಸಂಘಟನೆಗಳನ್ನು ಗೌರವಿಸಲಾಯಿತು.
ಪೂರ್ವಾಧ್ಯಕ್ಷ ಚಿದಾನಂದ ಇಡ್ಯಾ ವೇದಿಕೆಗೆ ಆಹ್ವಾನಿಸಿದರು. ಜೂನಿಯರ್ ಜೆಸಿ ಸದಸ್ಯ ಅಭಿಷೇಕ್ ಜೇಸಿ ವಾಣಿ ವಾಚಿಸಿದರು.
ಕಾರ್ಯಕ್ರಮ ಸಂಯೋಜಕಿ ಹೇಮಾವತಿ ಕೆ., ಘಟಕದ ಉಪಾಧ್ಯಕ್ಷ ಪ್ರೀತಂ ಶೆಟ್ಟಿ, ಜೂನಿಯರ್ ಜೆಸಿ ಸದಸ್ಯರುಗಳಾದ ಸಾಹಿತ್ಯ, ರಿತಿಷಾ , ಅನುಷ್ಕಾ, ಶಿವಾನಿ, ಪರಿಚಯಿಸಿದರು. ಘಟಕದ ಕಾರ್ಯದರ್ಶಿ ಅನುದೀಪ್ ಜೈನ್ ವಂದಿಸಿದರು.