



ಧರ್ಮಸ್ಥಳ: ಅಯೋಧ್ಯೆಯಲ್ಲಿನ ಶ್ರೀ ರಾಮನ ಮಂದಿರವು ಸುಂದರವಾಗಿ ಮೂಡಿಬಂದಿದೆ.ಮಂದಿರದೊಳಗಿನ ಶ್ರೀ ರಾಮನ ಬಿಂಬದ ಪ್ರಾಣಪ್ರತಿಷ್ಠೆಯು ಸೂಕ್ತ ರೀತಿಯಲ್ಲಿ ಜರುಗಿತು.ಪ್ರತಿಷ್ಟಿತ ಮಠಾಧಿಪತಿಗಳು ಮತ್ತು ಎಲ್ಲಾ ರಂಗದ ಪ್ರಮುಖರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕಾರ್ಯಕ್ರಮವು ಅತ್ಯಂತ ಶಿಸ್ತಿನಿಂದ ನಡೆದಿದೆ.


ಅಯೋಧ್ಯೆಯ ನಗರವನ್ನು ಹೂವಿನಿಂದ ಶೃಂಗಾರಗೊಳಿಸಿದ್ದರು. ಅಲ್ಲಲ್ಲಿ ಸ್ವಾಗತ ನೃತ್ಯವು ನಡೆಯುತ್ತಿದ್ದವು. ಎಲ್ಲಾ ರೀತಿಯಿಂದಲೂ ಕಾರ್ಯಕ್ರಮವು ವ್ಯವಸ್ಥಿತವಾಗಿಯೇ ನಡೆಯಿತು.
ರಾಮಮಂದಿರದ ಎದುರುಗಡೆ ಕುಳಿತ ಎಲ್ಲಾ ಸಂತರಿಗೂ ಅಲ್ಲಿಯೇ ಆಹಾರ, ಪಾನೀಯಗಳನ್ನು ವಿತರಿಸಿದರು.ಅಲ್ಲಿಯ ಹವಾಮಾನದಲ್ಲಿ ಚೆನ್ನಾಗಿ ಚಳಿಯೇ ಇತ್ತು, ಆದರೂ ಆತ್ಮೀಯವಾದ ಸ್ವಾಗತ ಮತ್ತು ವ್ಯವಸ್ಥಿತವಾದ ಕಾರ್ಯಕ್ರಮದಿಂದಾಗಿ ನಮಗೆಲ್ಲರಿಗೂ ಅಷ್ಟು ಸಮಸ್ಯೆಯೇ ಎನಿಸಲಿಲ್ಲ. ಹೊರಗಡೆ ಕುಳಿತವರಿಗೆ ಟಿ.ವಿ. ಪರದೆಯ ಮುಖಾಂತರ ಒಳಗೆ ನಡೆಯುವ ಪೂಜಾ ವಿಧಿ-ವಿಧಾನಗಳನ್ನು ತೋರಿಸುತ್ತಿದ್ದರು.
ಈ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಿಂದಾಗಿ ಮಹಾತ್ಮರೆಲ್ಲರೂ ಪ್ರಸನ್ನರಾಗಿ ಹೋದರು.ಈ ಕಾರ್ಯಕ್ರಮದಿಂದಾಗಿ ಅಲ್ಲಲ್ಲಿ ಪ್ರಯಾಣಕ್ಕೆ ಅಡೆತಡೆಗಳಿದ್ದವು.ನಾಳೆಯಿಂದ ಮಂದಿರಕ್ಕೆ ಮುಕ್ತ ದರ್ಶನ ಎಂದು ಘೋಷಿಸಲಾಗಿದೆ.
ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದರು ಹಾಗೂ ಎಲ್ಲಾ ಸಂತರ ಬಳಿ ಬಂದು ಗೌರವದಿಂದ ಮಾತನಾಡಿಸಿದರು ಎಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.








