ಬೆಳ್ತಂಗಡಿ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೃತಜ್ಞತಾ ಸಮಾರಂಭ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ವಾಣಿ ಕಾಲೇಜಿನಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೃತಜ್ಞತಾ ಸಭೆ ಮತ್ತು ಡಾ.ಅಮೃತ ಸೋಮೇಶ್ವರರವರಿಗೆ ನುಡಿ ನಮನ ಕಾರ್ಯಕ್ರಮ ಜ.12 ರಂದು ಜರಗಿತು.

ಸಭೆಯ ಆರಂಭಕ್ಕೆ ಮೌನ ಪ್ರಾರ್ಥನೆ ನಡೆಸಿ ಡಾ.ಅಮೃತ ಸೋಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಣೆಯೊಂದಿಗೆ ಡಾ.ಅಮೃತರ ಬಗ್ಗೆ ಉಜಿರೆ ಶ್ರೀ ಧ ಮ ಕಾಲೇಜಿನ ಉಪನ್ಯಾಸಕ ಡಾ.ದಿವ ಕೊಕ್ಕಡರವರು ಮಾತನಾಡುತ್ತಾ, ಅಮೃತರು ಸದ್ದು ಮಾಡುವ ಸ್ವಭಾವದವರಲ್ಲ.ಪ್ರಶಸ್ತಿ ಗೌರವಗಳನ್ನು ಅರಸಿದವರೂ ಅಲ್ಲ.ಆದರೆ ಕೀರ್ತಿ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ. ಅವರ ವಿಚಾರಗಳು, ಬರಹಗಳು ವಿಶ್ವ ಮಾದರಿ. ಅವರು ನಂಬಿದ, ಬೆಳೆಸಿದ ಜೀವನ ಮೌಲ್ಯಗಳು ಎಂದೂ ಮೃತವಾಗದ ಅಮೃತ ವಚನಗಳಾಗಿವೆ ಎಂದು ಹೇಳಿದರು.

ನಂತರ ಸಾಹಿತ್ಯ ಸಮ್ಮೇಳನದ ಬಗ್ಗೆ ಧರಣೇಂದ್ರ ಕೆ. ಜೈನ್, ಸಂಯೋಜನ ಸಮಿತಿಯ ಅಧ್ಯಕ್ಷ ಜಯಾನಂದ ಗೌಡ ಅನಿಸಿಕೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪೂರ್ಣಕಾಲಿಕವಾಗಿ ಮುದ್ರಣಗೊಂಡ ಚಾರುಮುಡಿ ನೆನಪಿನ ಸಂಚಿಕೆಯನ್ನು ಸಮ್ಮೇಳನದ ಸರ್ವಾಧ್ಯಕ್ಷ ಎ. ಕೃಷ್ಣಪ್ಪ ಪೂಜಾರಿ ಬಿಡುಗಡೆಗೊಳಿಸಿ, ದೈವಾನುಗ್ರಹ ಮತ್ತು ಸಂಕಲ್ಪ ಶುದ್ಧಿ ಇದ್ದರೆ ಜೀವನದಲ್ಲಿ ಯಶಸ್ಸು ತಾನಾಗಿಯೆ ಒದಗಿಬರುತ್ತದೆ.ಅದಕ್ಕೆ ಬೆಳ್ತಂಗಡಿ ತಾಲೂಕಿನ 18ನೆಯ ಕನ್ನಡ ಸಾಹಿತ್ಯ ಸಮ್ಮೇಳನವೆ ಸಾಕ್ಷಿ ಎಂದು ಅಭಿಪ್ರಾಯ ಪಟ್ಟು, ಸಮ್ಮೇಳನದ ಯಶಸ್ಸಿನಲ್ಲಿ ಭಾಗಿಗಳಾದ ಸರ್ವರನ್ನೂ ಅಭಿನಂದಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಯದುಪತಿ ಗೌಡ ಸಮ್ಮೇಳನದ ಅರ್ಥಪೂರ್ಣ ಆಯೋಜನೆಯಲ್ಲಿ ಭಾಗಿಗಳಾದ ಎಲ್ಲರಿಗೂ ಪರಿಷತ್ತಿನ ವತಿಯಿಂದ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಸಂಪತ್ ಬಿ ಸುವರ್ಣ ಬೆಳ್ತಂಗಡಿ, ಕೋಶಾಧ್ಯಕ್ಷೆ ಮೀನಾಕ್ಷಿ ಮಹಾಬಲ ಗೌಡ, ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರಮೀಳಾ ಉಪಸ್ಥಿತರಿದ್ದರು.

ಪರಿಷತ್ತಿನ ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ಸ್ವಾಗತಿಸಿದರು, ಸಂಯೋಜನ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ್ ಗೌಡರವರು ವಂದಿಸಿದರು.ಸಮ್ಮೇಳನದ ಕೋಶಾಧ್ಯಕ್ಷ ಸಮ್ಮೇಳನದ ಲೆಕ್ಕ ಪತ್ರ ಮಂಡಿಸಿದರು.ಉಪನ್ಯಾಸಕ ಬೆಳ್ಳಿಯಪ್ಪ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here