ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಭಾವಿ ಪರ್ಯಾಯ ಪೀಠಾಧೀಶ ಪುತ್ತಿಗೆ ಶ್ರೀಗಳವರಿಂದ ಆಶೀರ್ವಚನ

0

ಉಜಿರೆ: ಶ್ರೀ ಕೃಷ್ಣನು ಅರ್ಜುನನಿಗೆ ಹೇಳಿದ ಭಗವದ್ಗೀತೆಯ ಶ್ರೇಷ್ಠ ಸಂದೇಶ ನಮ್ಮ ಜೀವನದಲ್ಲೂ ತಿಳಿದು, ಅಳವಡಿಸಿಕೊಂಡರೆ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ.ಶ್ರೀ ಕೃಷ್ಣ ಜಗತ್ತಿಗೆ ನೀಡಿದ ಸಂದೇಶ  ನಮ್ಮ ಮನಸ್ಸಿಗೆ ಸಂತೋಷ  ಹಾಗೂ ಜೀವನಕ್ಕೆ ಮಾರ್ಗದರ್ಶನ ನೀಡಬಲ್ಲುದು.ಈ ನಿಟ್ಟಿನಲ್ಲಿ ತಮ್ಮ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯವನ್ನು ವಿಶ್ವ ಗೀತಾ ಪರ್ಯಾಯವಾಗಿ ಕೋಟಿ ಗೀತಾ ಯಜ್ಞದ ಮೂಲಕ  ಶ್ರೀ ಕೃಷ್ಣನಿಗೆ ಸಮರ್ಪಿಸುವ ಮಹತ್ತರ ಯೋಜನೆ ರೂಪಿಸಿದ್ದೇವೆ.ಜೀವನದ ಅಂತಿಮ ಗುರಿಯಾದ ಮೋಕ್ಷ ಸಾಧನೆಗೆ ಭಗವದ್ಗೀತೆ ದಾರಿ ತೋರಿಸಿ ಮಾರ್ಗದರ್ಶನ ನೀಡುವುದು ಎಂದು ಉಡುಪಿ ಪುತ್ತಿಗೆ ಮಠದ, ಭಾವಿ ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳವರು ನುಡಿದರು.

ಅವರು ಜ.4ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ಜನಾರ್ದನ ಸ್ವಾಮಿ ಹಾಗು ಪರಿವಾರ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ, ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು.ಪಾಶ್ಚಿಮಾತ್ಯರು ಶಾಲೆಗಳಲ್ಲಿ  ಭಗವದ್ಗೀತೆಯ ಅಧ್ಯಯನಕ್ಕೆ ಆಸಕ್ತಿ ಬೆಳೆಸಿಕೊಂಡಿದ್ದು, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಲಂಡನ್ ಗಳಲ್ಲಿ  ಭಗವದ್ಗೀತೆಯನ್ನು ಜಗತ್ತೇ ಕೊಂಡಾಡುತ್ತಿದೆ.ಅನ್ಯ ಮತದವರಿಗೆ ಬೈಬಲ್,ಕುರಾನ್ ತಿಳಿದಂತೆ ನಮ್ಮ ಮಕ್ಕಳಿಗೆ ಭಗವದ್ಗೀತೆ ಗೊತ್ತಿಲ್ಲ., ಧರ್ಮದ ಬಗೆಗೆ ಅರಿವಿಲ್ಲ.ಮನೆ ಮನೆಗಳಲ್ಲಿ ನಿತ್ಯ ನಿರಂತರ ಗೀತೆಯ ಆರಾಧನೆಯಿಂದ  ಸರ್ವರಿಗೂ ಶ್ರೇಯಸ್ಸು, ಉಜ್ವಲ ಭವಿಷ್ಯವಿದೆ.ಭಗವದ್ಗೀತೆಯ ಆರಾಧನೆಯಿಂದ ಏಕತೆ ಸಾಧಿಸಿ.ನಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳೋಣ ಎಂದರು.

ಶ್ರೀ ಕೃಷ್ಣನಿಗೆ ಗೀತೆಯಷ್ಟು ಇಷ್ಟ ಬೇರೊಂದಿಲ್ಲ.ಗೀತೆ  ಓದುವ ಇನ್ನೊಬ್ಬ ಶ್ರೇಷ್ಠ ಭಕ್ತನಿಲ್ಲ.ಸಾಂಪ್ರದಾಯಿಕ ಪೂಜೆಗೆ ಸೀಮಿತವಾಗದೆ ಗೀತೆಯ ಮನನ,ಸೇವೆ  ಸರ್ವ ಶ್ರೇಷ್ಠವಾದುದು.ಕೋಟಿ ಜನರಿಂದ ಗೀತೆ ಬರೆಸಿ ಅದನ್ನು ಶ್ರೀ ಕೃಷ್ಣನಿಗೆ ಅರ್ಪಣೆ ಮಾಡಲು ಕೋಟಿ ಗೀತಾಲೇಖನ ಯಜ್ಞದಲ್ಲಿ ಎಲ್ಲರು ಪಾಲ್ಗೊಳ್ಳುವ ಸಂಕಲ್ಪ ಮಾಡುವುದರಿಂದ  ಕೃಷ್ಣನ  ಅನುಗ್ರಹವಾಗುವುದು.1992ರ ಪರ್ಯಾಯದಲ್ಲಿ ಲಕ್ಷ ಗೀತಾ ಲೇಖನ ಯಜ್ಞದ ವಿಸ್ತೃತ ರೂಪವೇ ಕೋಟಿ ಗೀತಾ ಲೇಖನ ಯಜ್ಞವಾಗಿದ್ದು  2 ದೀಕ್ಷೆಗಳನ್ನು ಕೈಗೊಳ್ಳಬೇಕು.ಒಂದು ದುಶ್ಚಟವನ್ನು ಬಿಡುವುದು ಮತ್ತು ಪೂಜೆ ಮುಗಿಯದೆ ಮೊಬೈಲ್ ಮುಟ್ಟುವುದಿಲ್ಲವೆಂಬ ಹೊಸ ನಿಯಮ, ವೃತ ಸಂಕಲ್ಪ ಮಾಡಬೇಕು ಎಂದರು.

ಚತುರ್ಥ ಪರ್ಯಾಯ ಯೋಜನೆಗಳು: ಅವರು ತಮ್ಮ ಚತುರ್ಥ ಪರ್ಯಾಯದ ಪ್ರಮುಖ ಯೋಜನೆಗಳನ್ನು ಪ್ರಕಟಿಸಿ, ಪರ್ಯಾಯಾವಧಿಯಲ್ಲಿ  ಸನ್ಯಾಸಾಶ್ರಮದ ಸುವರ್ಣ ವರ್ಷಾಚರಣೆಯ ಸವಿನೆನಪಿಗಾಗಿ ಶ್ರೀ ಕೃಷ್ಣನಿಗೆ ಭಕ್ತರ ಸಹಕಾರದಿಂದ ಪಾರ್ಥಸಾರಥಿ ಸುವರ್ಣ ರಥ ನಿರ್ಮಾಣ, ಗೀತಾ ಮಂದಿರದಲ್ಲಿ 2 ವರ್ಷ ಅಖಂಡ ನಿತ್ಯ ಗೀತಾ ಪಾರಾಯಣ, ಪರ್ಯಾಯದ ಅಂತಿಮವಾಗಿ ಗೀತಾ ಮಹಾಯಾಗ, ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ, ಉಡುಪಿಯಲ್ಲಿ ಭಕ್ತರ ಅನುಕೂಲತೆಗಾಗಿ ಅಷ್ಟೋತ್ತರ ಭವನ ನಿರ್ಮಾಣ ಹಾಗು ಕಳ್ಸಂಕದಲ್ಲಿ ಆಚಾರ್ಯ ಮಧ್ವರು ಶ್ರೀ ಕೃಷ್ಣನನ್ನು ಹಿಡಿದುಕೊಂಡು ಬಂದ ನೆನಪಿಗಾಗಿ  ಭವ್ಯ ಸ್ವಾಗತ ಗೋಪುರ ನಿರ್ಮಾಣ ಮೊದಲಾದ ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿ, ಪರ್ಯಾಯೋತ್ಸವದಲ್ಲಿ ಭಾಗವಹಿಸುವಂತೆ ಆಮಂತ್ರಣ ನೀಡಿದರು.

ಕಿರಿಯ ಪಟ್ಟದ ಶ್ರೀ ಸುಶ್ರೀನ್ದ್ರ ತೀರ್ಥ ಶ್ರೀಗಳವರು ಉಪಸ್ಥಿತರಿದ್ದರು.ಶ್ರೀಗಳವರ ಪಟ್ಟದ ದೇವರ ಮಹಾಪೂಜೆ ನಡೆಯಿತು.ಹಿರಿಯ ಹಾಗು ಕಿರಿಯ ಶ್ರೀಗಳವರನ್ನು ಉಜಿರೆಯ ನಾಗರಿಕರು ಮಹಾದ್ವಾರದ ಬಳಿಯಿಂದ ಪೂರ್ಣಕುಂಭ, ಸಕಲ ವೈಭವಗಳೊಂದಿಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಕ್ಷೇತ್ರದ ವತಿಯಿಂದ  ಸ್ವಾಗತಿಸಿ, ಗೌರವಿಸಿ, ಪ್ರಸ್ತಾವಿಸಿದರು.ಶ್ರೀಗಳವರು ನೆರೆದ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ಹಾಗೂ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನೀಡಿ ಪರ್ಯಾಯೋತ್ಸವ ಆಮಂತ್ರಣ ನೀಡಿದರು.

ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕಾರ್ಯದರ್ಶಿ ರಾಜಪ್ರಸಾದ್ ಪೊಲ್ನಾಯ, ಉಜಿರೆ ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ, ಧರ್ಮಸ್ಥಳ ವಲಯಾಧ್ಯಕ್ಷ ಡಾ.ಶ್ರೀಪತಿ ಆರ್ಮುಡತ್ತಾಯ, ಪರಾರಿ ವೆಂಕಟ್ರಮಣ ಹೆಬ್ಬಾರ್, ಜಯರಾಮ ಪಡ್ಡಿಲ್ಲಾಯ, ಅನಂತಕೃಷ್ಣ ಪಡುವೆಟ್ನಾಯ, ಶ್ರೀರಂಗ ನೂರಿತ್ತಾಯ, ಡಾ.ಶ್ರೀಧರ ಭಟ್, ಹರ್ಷಕುಮಾರ್, ಜನಾರ್ದನ ತೋಳ್ಪಡಿತ್ತಾಯ, ಧನಂಜಯ ರಾವ್, ಸರೋಜಾ ಕೆದಿಲಾಯ, ಗಾಯತ್ರಿ ಶ್ರೀಧರ್, ಪಿ.ಜಿ.ಲಲಿತ, ಶೋಭಾ ಕುದ್ರೆನ್ತಯ, ಸ್ವರ್ಣ ಶ್ರೀರಂಗ ನೂರಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here