ಉಜಿರೆ: ಎಲ್ಲಾ ಜನತೆ ಆರೋಗ್ಯವಂತರಾಗಿರಬೇಕು ಎಂಬ ಒಳ್ಳೆಯ ಉದ್ದೇಶದೊಂದಿಗೆ ಪೂಜ್ಯ ಹೆಗ್ಗಡೆಯವರು ನಿರ್ಮಿಸಿದ ಈ ಆಸ್ಪತ್ರೆಯಲ್ಲಿ 2023ರಲ್ಲಿ ಲಕ್ಷಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳೊಂದಿಗೆ ಹೈಟೆಕ್ ವೈದ್ಯಕೀಯ ಸೇವೆಯನ್ನು ಗ್ರಾಮೀಣ ಜನತೆಗೆ ಮಿತದರದಲ್ಲಿ ನೀಡಿಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಿರ್ಮಾಣವಾದ ಈ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ನಾವು ನಮ್ಮ ಕರ್ತವ್ಯವನ್ನು ಶ್ರದ್ಧಾಭಕ್ತಿಯಿಂದ ಮಾಡಿದಾಗ ನಮಗೆ ಭಗವಂತನ ಸೇವೆಯ ಫಲ ಸಿಗುತ್ತದೆ.ಈಗಾಗಲೇ ವೈದ್ಯರು, ದಾದಿಯರು ಹಾಗೂ ಎಲ್ಲಾ ಸಿಬ್ಬಂದಿಗಳು ಅತ್ಯುತ್ತಮ ರೀತಿಯಲ್ಲಿ ರೋಗಿಗಳ ಸೇವೆಯನ್ನು ಮಾಡುವ ಮೂಲಕ ನಮ್ಮ ಆಸ್ಪತ್ರೆ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಹೇಳಿದರು.
ಅವರು ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ ವರ್ಷಾಚರಣೆ ವೇಳೆ ದೀಪ ಬೆಳಗಿಸಿ ಹೊಸ ವರ್ಷವನ್ನು ಸ್ವಾಗತಿಸಿ ಮಾತನಾಡುತ್ತಾ, 2024ರಲ್ಲಿ ಎಲ್ಲಾ ಜನರು ಆರೋಗ್ಯದಿಂದ ಸುಖಮಯ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.
ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಬಾಲಕೃಷ್ಣ ಭಟ್ ದೀಪ ಬೆಳಗಿಸಿ ಶುಭ ಹಾರೈಸುತ್ತಾ, ಇಲ್ಲಿಗೆ ಬರುವ ರೋಗಿಗಳು ಶೀಘ್ರ ಗುಣಮುಖರಾಗಿ ಆರೋಗ್ಯವಂತ ಜೀವನ ನಡೆಸುವಂತಾಗಲಿ ಎಂದರು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್, ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಆಸ್ಪತ್ರೆಯ ಸಿಬ್ಬಂದಿಗಳ ತಂಡ ಹೂವಿನ ಎಸಳುಗಳಿಂದ ರಂಗೋಲಿ ರಚಿಸಿದ್ದರು.
ಇನ್ಶ್ಯೂರೆನ್ಸ್ ವಿಭಾಗದ ಜಗನ್ನಾಥ ಎಂ ಕಾರ್ಯಕ್ರಮ ನಿರೂಪಿಸಿದರು.ಎಲ್ಲರಿಗೂ ಸಿಹಿ ಹಂಚಿ ಹೊಸ ವರ್ಷವನ್ನು ಸ್ವಾಗತಿಸಲಾಯಿತು.