ದಿವಾಳಿಯ ಅಂಚಿನಲ್ಲಿ ರಾಜ್ಯ ಸರಕಾರ: ಪ್ರತಾಪಸಿಂಹ ನಾಯಕ್- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: “ಈ ಬಾರಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಮಯ ಪ್ರತಿಪಕ್ಷ ಮುಂದಿಟ್ಟ ರಾಜ್ಯದ ಸಮಸ್ಯೆಗಳಿಗೆ ಸರಕಾರ ನೀಡಿದ ಉತ್ತರಗಳಿಂದ ಸರಕಾರವು ಆರ್ಥಿಕ ದಿವಾಳಿಯ ಅಂಚಿನಲ್ಲಿದೆ ಎಂಬುದು ಸ್ಪಷ್ಟ ಗೊಂಡಿದೆ”ಎಂದು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.

ಅವರು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಡಿ.18 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “ರಾಜ್ಯವು 125 ವರ್ಷಗಳಿಂದ ಕಾಣದ ಬರಗಾಲ ಸ್ಥಿತಿ ಎದುರಿಸುತ್ತಿದೆ.ಆದರೂ ಸರಕಾರ ಈ ಬಗ್ಗೆ ಇನ್ನೂ ಯಾವುದೇ ಪರಿಹಾರ ನೀಡಲು ಕ್ರಮ ಕೈಗೊಂಡಿಲ್ಲ.2 ಸಾವಿರ ರೂ.ಘೋಷಣೆ ಮಾಡಿದ್ದರು.ಅದು ರೈತರ ಖಾತೆ ತಲುಪಿಲ್ಲ.ಉತ್ತರ ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿರುವ ನೀರಿನ ಯೋಜನೆಗಳ ಕುರಿತು ಯೋಚಿಸಿಲ್ಲ.ಅಧಿವೇಶನದಲ್ಲಿ ಬರ ನಿರ್ವಹಣೆಗೆ 10 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಣೆಗೆ ಹಾಗೂ ರೈತರಿಗೆ 2 ಲಕ್ಷ ರೂ.ವರೆಗೆ ಸಾಲ ಮನ್ನಾ ಮಾಡಲು ಪ್ರತಿಪಕ್ಷ ಆಗ್ರಹಿಸಿತ್ತು.ಆದರೆ ಸರಕಾರ ಸ್ಪಂದನೆ ನೀಡಿಲ್ಲ.ಹಿಂದುಳಿದ ವರ್ಗಕ್ಕೆ 50 ಕೋಟಿ ರೂ. ಅಲ್ಪಸಂಖ್ಯಾತರ ಅಭಿವೃದ್ಧಿಗೆ 10ಸಾವಿರ ಕೋಟಿ ರೂ.ಅನುದಾನ ಘೋಷಣೆ ಮಾಡಿದ್ದರು ಸರಕಾರ ಅದನ್ನು ಬಿಡುಗಡೆಗೊಳಿಸುವ ಸ್ಥಿತಿಯಲ್ಲಿಲ್ಲ ಎಂದರು.

ಇದುವರೆಗೆ ಸರಕಾರ ನಿಗಮಗಳಿಗೆ ಒಂದು ರೂ.ಬಿಡುಗಡೆಗೊಳಿಸಿರುವುದಿಲ್ಲ.ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರೂ.ಗ್ಯಾರಂಟಿ ಯೋಜನೆಗೆ ಉಪಯೋಗಿಸಿ ಅನ್ಯಾಯ ಮಾಡಲಾಗಿದೆ.ರೈತರ, ಶಾಲಾ ಮಕ್ಕಳ, ಕಾರ್ಮಿಕರ ಹಲವು ಯೋಜನೆಗಳನ್ನು ಕಡಿತಗೊಳಿಸಲಾಗಿದೆ.

ಶಾಸಕರ ಪ್ರದೇಶಾಭಿವೃದ್ದಿ ನಿಧಿಯ 2 ಕೋಟಿ ರೂ.ಪೈಕಿ, 50 ಲಕ್ಷ ರೂ.ಮಾತ್ರ ಬಿಡುಗಡೆಗೊಂಡಿದೆ.ಒಟ್ಟಿನಲ್ಲಿ ಎಲ್ಲರಿಗೂ ಉಚಿತ, ಆರ್ಥಿಕ ಹಿನ್ನಡೆ ಖಚಿತ ಎಂಬ ಸ್ಥಿತಿ ಸದ್ಯ ರಾಜ್ಯದಲ್ಲಿದೆ” ಎಂದು ಹೇಳಿದರು.

ಬಿಡುಗಡೆಗೊಳ್ಳದ ಕೃಷಿಸಾಲದ ಹೆಚ್ಚುವರಿ ಮೊತ್ತ:
ಈ ಬಾರಿಯ ಬಜೆಟ್ ನಲ್ಲಿ ಶೂನ್ಯ ದರದಲ್ಲಿ ಸಹಕಾರಿ ಸಂಘಗಳು ನೀಡುವ 3ಲಕ್ಷ ರೂ.ಸಾಲವನ್ನು 5ಲಕ್ಷ ರೂ.ಗೆ ಹಾಗೂ ದೀರ್ಘಾವಧಿ ಸಾಲದ ಮೊತ್ತವನ್ನು 10ರಿಂದ 15ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.ಆದರೆ ಸರಕಾರ ಇನ್ನೂ ಹಣ ಬಿಡುಗಡೆಗೊಳಿಸದ ಕಾರಣ ಇದು ರೈತರನ್ನು ತಲುಪಿಲ್ಲ.ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ.ತಾಲೂಕಿನ ಫಾರ್ಮ್ ನಂ.3, ವಿದ್ಯುತ್ ಕಡಿತ ಕಳೆಂಜದ ಘಟನೆಯನ್ನು ಸರಕಾರದ ಗಮನಕ್ಕೆ ತರಲಾಗಿದೆ.ಕಳೆಂಜದ ವಿಚಾರ ವಿಧಾನ ಸಭೆ, ಪರಿಷತ್ ನ ಹಕ್ಕುಚ್ಯುತಿ ಸಮಿತಿ ಮುಂದಿದ್ದು ಅರಣ್ಯ ಸಚಿವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ, ಶ್ರೀನಿವಾಸ್ ರಾವ್, ಸಹಕಾರಿ ಧುರೀಣ ಮಹಾವೀರ ಮರೋಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here