ಉಜಿರೆ: ಸರಕಾರದ ಲೆಕ್ಕಾಚಾರದಂತೆ 60 ವರ್ಷಕ್ಕೆ ನಿವೃತ್ತಿಯಾದರೆ ಅವರು ಖಿನ್ನತೆಗೊಳಗಾಗುತ್ತಾರೆ.ಅವರಿಗೆ ಸಮಾಜದ ಬಗೆಗಿರುವ ಬದ್ಧತೆ,ಕಾರ್ಯಕಲಾಪಗಳ ಬಗೆಗೆ ಬದ್ಧತೆಯ ಅರಿವಾಗುತ್ತದೆ.ಅವರು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಅವರಲ್ಲಿ ಕ್ರಿಯಾಶೀಲತೆಗೆ ಭಂಗವಿರುವುದಿಲ್ಲ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ನುಡಿದರು.ಅವರು ಡಿ.17ರಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಗಣೇಶ ಕಲಾ ಭವನದಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್, ಬಂಟ್ವಾಳ ಇದರ ದ್ವಿತೀಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮನುಷ್ಯ ದೇಹದಿಂದ ಯಾರೂ ಶಾಶ್ವತರಲ್ಲ.ಸಾಮಾಜಿಕ ಕಾರ್ಯಗಳಲ್ಲಿ ಜನ ಅವರನ್ನು ನೆನಪಿಸುತ್ತಾರೆ.ಬೇರೆ ಬೇರೆ ಯೋಜನೆಗಳಲ್ಲಿ ಪ್ರತಿಷ್ಠಾನ ಕೇವಲ ಭಾಷಣಗಳಿಗೆ ಸೀಮಿತವಾಗದೆ ಯೋಜನೆಯ ಕನಸು ನನನಸಾಗಿಸಲು ದೇವತಾ ಸನ್ನಿಧಿಯಲ್ಲಿ ಕಾರ್ಯಕ್ರಮ ರೂಪಿಸಿ ಮುನ್ನಡೆಸುವ ವಿಶ್ವಾಸವಿದೆ.ಸಂಸ್ಥೆ ಸಮಾಜಮುಖಿಯಾಗಿ ತೆರೆದುಕೊಂಡು ಯಶಸ್ವಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಶ್ರೀ ಸೌತಡ್ಕ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಹಿರಿಯ ಸಾಧಕರ ಅನುಭವ ಇತರರಿಗೆ ಮಾದರಿಯಾಗಿದೆ.ಹಿರಿಯರು ಒಗ್ಗಟ್ಟಿನಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಸಮಾಜಮುಖಿ ಕಾರ್ಯಕ್ರಮ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ.ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿಯಿಲ್ಲದೆ ಕೃಷಿಯಲ್ಲಿ ತೊಡಗಿಸಿಕೊಳ್ಳುವವರು ಹಿರಿಯರು ಮಾತ್ರ.ಯುವಕರಲ್ಲಿ ಆತ್ಮಸ್ಥೈರ್ಯ ತುಂಬಿಕೊಳ್ಳಲು ಹಿರಿಯರ ಸೇವಾ ಪ್ರತಿಷ್ಠಾನ ಪೂರಕವಾಗಿದೆ.ನಮ್ಮ ಸಂಸ್ಕೃತಿ, ಸಾಮಾಜಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿ ಎಂದು ಆಶಿಸಿದರು.
ಬೆಳ್ತಂಗಡಿ ಭಾರತೀಯ ಜೀವ ವಿಮಾ ನಿಗಮದ ಬ್ರಾಂಚ್ ಮ್ಯಾನೇಜರ್ ವಿ. ಎಸ್ .ಕುಮಾರ್ ಸಂಧ್ಯಾಕಾಲದ ಸಂತೋಷದ ಜೀವನವನ್ನು ರೂಪಿಸುವ ವ್ಯವಸ್ಥೆಯನ್ನು ಪೋಷಕರು ಮೊದಲೇ ಮಾಡಿಕೊಳ್ಳಬೇಕು ಎಂದು ಉಪನ್ಯಾಸ ನೀಡಿದರು.ವೇದಿಕೆಯಲ್ಲಿ ಶ್ರೀ ಕ್ಷೇತ್ರ ಸೌತಡ್ಕದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಹಿರಿಯರ ಸೇವಾ ಪ್ರತಿಷ್ಠಾನದ ಸಹಸಂಚಾಲಕ ಭಾಸ್ಕರ ಬಾರ್ಯ, ಉಪಾಧ್ಯಕ್ಷ ಜಯರಾಮ ಭಂಡಾರಿ ಉಪಸ್ಥಿತರಿದ್ದರು.
ಸ್ವಾಗತಿಸಿ, ಪ್ರಸ್ತಾವಿಸಿದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯುರು ನಾರಾಯಣ ಭಟ್ ಪ್ರತಿಷ್ಠಾನವು 5 ಜಿಲ್ಲಾ ವ್ಯಾಪ್ತಿ ಹೊಂದಿದ ಸದಸ್ಯರ ಸಹಕಾರದಿಂದ ಒಂದು ಸಹಕಾರಿ ಸಂಘದ ಸ್ಥಾಪನೆ, ಆಶ್ರಮ ಹಾಗು ಗೋಶಾಲೆಯನ್ನು ನಡೆಸುವುದು ಹಾಗು ಗುರುಕುಲ ಪದ್ಧತಿಯ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ ಎಂದರು.ವೇದವ್ಯಾಸ ರಾಮಕುಂಜ ಪ್ರಾರ್ಥಿಸಿ, ಮಹಾಲಿಂಗ ಭಟ್ ನಿರೂಪಿಸಿ, ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.
10 ಮಂದಿ ಹಿರಿಯ ಸಾಧಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.ಪಟ್ಟಾಭಿರಾಮ ಸುಳ್ಯ ಅವರಿಂದ ಮಿಮಿಕ್ರಿ ಕಾರ್ಯಕ್ರಮ ಹಾಗು ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ಸರಣಿ ಕಾರ್ಯಕ್ರಮದಂಗವಾಗಿ ಸಂಘ ಮತ್ತು ಅತಿಥಿ ಕಲಾವಿದರಿಂದ “ರಾಜಸೂಯಾಧ್ವರ “ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.