ತೋಟತ್ತಾಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಮಾಕಳ ರಾಮಣ್ಣ ಗೌಡ ಎಂಬವರ ತೋಟಕ್ಕೆ ಶುಕ್ರವಾರ ತಡರಾತ್ರಿ ದಾಳಿ ಇಟ್ಟ ಕಾಡಾನೆಗಳು 50 ಬಾಳೆಗಿಡ, ಎರಡು ತೆಂಗಿನ ಮರ, ಅಡಕೆ ಮರಗಳನ್ನು ಧ್ವಂಸಗೊಳಿಸಿವೆ.ಮನೆಯಿಂದ ಅನತಿ ದೂರದ ಅಂಗಳದಲ್ಲಿ ಒಣಗಲು ಹಾಕಿದ ಅಡಕೆಗೆ ಆನೆಗಳು ತುಳಿದಿದ್ದು ನಷ್ಟ ಉಂಟಾಗಿದೆ.
ಗುಂಪಿನಲ್ಲಿ ಎರಡು ಆನೆಗಳಿದ್ದು ಒಂದು ಸಣ್ಣ ಆನೆ ಹಾಗೂ ಇನ್ನೊಂದು ದೊಡ್ಡ ಆನೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಈ ಪರಿಸರದಲ್ಲಿ ತಿರುಗಾಟ ನಡೆಸುವ ಮೂರು ಆನೆಗಳ ಹಿಂಡಿನಿಂದ ಒಂದು ಆನೆ ಬೇರ್ಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಈ ಗುಂಪಿನಲ್ಲಿ ಇರುವ ಮರಿಯಾನೆ ಕಳೆದ ನಾಲ್ಕು ವರ್ಷಗಳ ಹಿಂದೆ ಕಡೆ ಕಡಿರುದ್ಯಾವರದ ತೋಟವೊಂದರಲ್ಲಿ ಗುಂಪಿನಿಂದ ಬೇರ್ಪಟ್ಟು ಬಾಕಿಯಾಗಿದ್ದು, ಬಳಿಕ ಅದನ್ನು ಅರಣ್ಯ ಇಲಾಖೆ ಕಾಡಿಗೆ ಬಿಟ್ಟಿತ್ತುಈಗ ಈ ಮರಿಯಾನೆ ಹೆಚ್ಚಿನ ಬೆಳವಣಿಗೆ ಹೊಂದಿರುವ ಕುರಿತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತೋಟತ್ತಾಡಿಯಲ್ಲಿ ಚಿರತೆ ದಾಳಿ:
ಕಾಡಾನೆಗಳು ಕಂಡು ಬಂದ ಪ್ರದೇಶದಿಂದ 3 ಕಿಮೀ ದೂರದಲ್ಲಿರುವ ತೋಟತ್ತಾಡಿ ಗ್ರಾಮದ ಕುಂಟಾಡಿ ಎಂಬಲ್ಲಿ ಸಾಕು ನಾಯಿಯ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.ವಿಜು ಅವರ ಮನೆಯಲ್ಲಿ ಒಟ್ಟು ಮೂರು ಸಾಕು ನಾಯಿಗಳಿದ್ದು ಚಿರತೆ ಒಂದು ನಾಯಿಯ ಮೇಲೆ ದಾಳಿ ನಡೆಸಿದಾಗ ಉಳಿದ ಎರಡು ನಾಯಿಗಳು ಚಿರತೆಯ ಮೇಲೆ ದಾಳಿ ಮಾಡಿದ್ದು ಈ ಸಮಯ ಚಿರತೆ ಸ್ಥಳದಿಂದ ಓಡಿಹೋಗಿದೆ.ಚಿರತೆ ದಾಳಿಗೆ ತುತ್ತಾದ ನಾಯಿ ಜೀವನ್ಮರಣ ಪರಿಸ್ಥಿತಿಯಲ್ಲಿದೆ.ಸ್ಥಳಕ್ಕೆ ಡಿ.ಆರ್.ಎಫ್.ಒ ಭವಾನಿ ಶಂಕರ್, ಸಿಬ್ಬಂದಿಗಳು ಭೇಟಿ ನೀಡಿದ್ದು, ಚಿರತೆ ಸೆರೆಗೆ ಬೋನು ಇರಿಸಲು ಕ್ರಮ ಕೈಗೊಂಡಿದ್ದಾರೆ.