ಲಾಯಿಲ ಗಾಂಧಿನಗರದ ಉಮೇಶ್ ಗೌಡ ಮರ್ಡರ್ ಕೇಸ್: ಅಪರಾಧಿ ಯೋಗೀಶ್‌ಗೆ ಜೀವಾವಧಿ ಶಿಕ್ಷೆ

0

ಬೆಳ್ತಂಗಡಿ: ರಸ್ತೆ ಬಳಸುವ ವಿಚಾರವಾಗಿ 2020ರ ಫೆ.9ರಂದು ನಡೆದಿದ್ದ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಉಮೇಶ ಗೌಡ (54)ರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಯೋಗೀಶ (55)ನಿಗೆ ಮಂಗಳೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಘಟನೆಯ ಹಿನ್ನೆಲೆ:
ಲಾಯಿಲ ಗ್ರಾಮದ ಗಾಂಧಿನಗರ ನಿವಾಸಿ ಯೋಗೀಶ ಮತ್ತು ಆತನ ಸಹೋದರಿಗೆ ಸೇರಿದ ಜಮೀನಿನಲ್ಲಿದ್ದ ಮಣ್ಣಿನ ರಸ್ತೆಯನ್ನು ನಾಗೇಶ ಮತ್ತು ಕುಟುಂಬದವರು ಮನೆಗೆ ಹೋಗಲು ಕಾಲುದಾರಿಯಾಗಿ ಬಳಸುತ್ತಿದ್ದರು.2020ರ ಫೆ.9ರಂದು ನಾಗೇಶ ಅವರ ತಾಯಿಯ ಶ್ರಾದ್ಧ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಾಗೇಶ ಅವರು ಸಹೋದರ ಉಮೇಶರವರ ಪತ್ನಿಯೊಂದಿಗೆ ಹೋಗಿದ್ದರು.ಅವರ ಕುಟುಂಬದ ಇತರರು ಕೂಡ ಅದೇ ರಸ್ತೆಯಲ್ಲಿ ತೆರಳಿದ್ದರು.ಅಂದು ರಾತ್ರಿ 9.30ಕ್ಕೆ ಯೋಗೀಶ ರಸ್ತೆಯನ್ನು ಬಂದ್ ಮಾಡುವ ಉದ್ದೇಶದಿಂದ ಹಾಲೋಬ್ಲಾಕ್ ಅಡ್ಡ ಇಟ್ಟಿದ್ದ.ಇದನ್ನು ತಿಳಿದ ನಾಗೇಶ, ಅವರ ಸಹೋದರ ಉಮೇಶ, ಪತ್ನಿ ಲೀಲಾವತಿ ಮತ್ತು ಸಹೋದರಿ ವನಜಾ ಅವರು ಯೋಗೀಶನ ಬಳಿ ಹೋಗಿ ರಸ್ತೆ ತಡೆ ಮಾಡಿರುವುದನ್ನು ತೆರವುಗೊಳಿಸುವಂತೆ ಹೇಳಿದ್ದರು.ಆಗ ಯೋಗೀಶನ ಜತೆಗಿದ್ದ ಆತನ ಪುತ್ರ ಜೀವನ್ ಅವರು ನಾಗೇಶ ಮತ್ತು ಕುಟುಂಬಸ್ಥರನ್ನು ಅವಾಚ್ಯ ಶಬ್ದದಿಂದ ಬೈದು ಅಲ್ಲಿದ್ದ ಕಬ್ಬಿಣದ ಸರಳಿನಲ್ಲಿ ಹಲ್ಲೆಗೆ ಮುಂದಾಗಿದ್ದರು. ಆಗ ನಾಗೇಶ ಮತ್ತು ಕುಟುಂಬಸ್ಥರು ಹಲ್ಲೆ ಆಗದಂತೆ ಪ್ರತಿರೋಧ ವ್ಯಕ್ತಪಡಿಸಿದ್ದರು.ನಾಗೇಶ ಅವರ ಸಹೋದರಿ ಯೋಗೀಶನ ಕೈಯಲ್ಲಿದ್ದ ಕಬ್ಬಿಣದ ಸರಳನ್ನು ಕಸಿದುಕೊಂಡಿದ್ದರು.ಆಗ ಯೋಗೀಶ ಹತ್ತಿರದಲ್ಲಿದ್ದ ಶೆಡ್‌ಗೆ ತೆರಳಿ ಚೂರಿ ತಂದು ಉಮೇಶ ಅವರ ಎದೆಯ ಭಾಗಕ್ಕೆ ಚುಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದ.

ಉಮೇಶ ಸ್ಥಳದಲ್ಲೇ ಕುಸಿದು ಬಿದ್ದಿದ್ದು ಅವರನ್ನು ಉಜಿರೆ ಆಸ್ಪತ್ರೆಗೆ ಅನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಉಮೇಶ್ ಮೃತಪಟ್ಟಿದ್ದರು.

ಬೆಳ್ತಂಗಡಿಯ ವೃತ್ತ ನಿರೀಕ್ಷಕರಾಗಿದ್ದ ಸಂದೇಶ್ ಪಿ.ಜಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದರು. ಆರೋಪಿ ಯೋಗೀಶ ನ್ಯಾಯಾಂಗ ಬಂಧನದಲ್ಲಿದ್ದ. ಎರಡನೇ ಆರೋಪಿ ಜೀವನ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಯೋಗೀಶನ ಜಾಮೀನು ಅರ್ಜಿ ಎರಡು ಬಾರಿ ತಿರಸ್ಕೃತಗೊಂಡಿತ್ತು. ಹಾಗಾಗಿ ಕಳೆದ 3 ವರ್ಷ 9 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿಯೇ ಇದ್ದ. ವಿಚಾರಣೆ ಪೂರ್ಣಗೊಳಿಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಅವರು ಆರೋಪಿ ಯೋಗೀಶ ತಪ್ಪಿತಸ್ಥನೆಂದು ತೀರ್ಪು ನೀಡಿದ್ದಾರೆ. 2ನೇ ಆರೋಪಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಅಪರಾಧಿ ಯೋಗೀಶನಿಗೆ ಜೀವಾವಧಿ ಶಿಕ್ಷೆ ಹಾಗೂ 3 ಲ.ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 3 ಲ.ರೂ. ದಂಡವನ್ನು ಉಮೇಶ ಅವರ ಪತ್ನಿ ಲೀಲಾವತಿ ಅವರಿಗೆ ಪರಿಹಾರ ರೂಪದಲ್ಲಿ ಸಂದಾಯ ಮಾಡಲು ಆದೇಶ ನೀಡಿದ್ದಾರೆ. ಅಭಿಯೋಜನೆಯ ಪರ 16 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ವಾದಿಸಿದ್ದರು.

LEAVE A REPLY

Please enter your comment!
Please enter your name here