ಹರೀಶ್ ಪೂಂಜ ಹೇಳಿದ ವಿಚಾರ ಸತ್ಯಕ್ಕೆ ದೂರವಾದ ವಿಚಾರ ಎಂದು ಮೆಸ್ಕಾಂ ಎಇಇ ಲಿಖಿತವಾಗಿ ತಿಳಿಸಿದ್ದಾರೆ: ವಸಂತ ಬಂಗೇರ- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾದ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನ.13ರಂದು ದೀಪಾವಳಿ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ 4ನೇ ವರ್ಷದ ದೋಸೆ ಹಬ್ಬ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜರವರು ಮೆಸ್ಕಾಂ ಇಲಾಖೆಯ ಎಇಇಗೆ ಮಾಜಿ ಶಾಸಕ ವಸಂತ ಬಂಗೇರರು ಬೈದಿದ್ದಾರೆ ಎಂದು ಹೇಳಿರುವ ವಿಚಾರಕ್ಕೆ ಸಂಬಂಧಿಸಿ ನ.22ರಂದು ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಶಾಸಕ ಹರೀಶ್ ಪೂಂಜರವರು ಹೇಳಿರುವ ಮಾತು ಸತ್ಯಕ್ಕೆ ದೂರವಾದ ವಿಚಾರ ಎಂದು ಮೆಸ್ಕಾಂ ಎಇಇ ನನಗೆ ಲಿಖಿತವಾಗಿ ತಿಳಿಸಿದ್ದಾರೆ.ಹರೀಶ್ ಪೂಂಜರವರ ಹೇಳಿಕೆ ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದು ಹೇಳಿದ್ದಾರೆ.

ಲಿಖಿತ ಸ್ಪಷ್ಟನೆ ನೀಡಿದ ಮೆಸ್ಕಾಂ ಎಇಇ: ದೋಸೆ ಹಬ್ಬದ ಸಂದರ್ಭದಲ್ಲಿ ಹರೀಶ್ ಪೂಂಜರವರು ಮಾಡಿರುವ ಭಾಷಣದಲ್ಲಿ ವಸಂತ ಬಂಗೇರರು ನನಗೆ, ನನ್ನ ಹೆಂಡತಿ, ಮಕ್ಕಳು ಹಾಗೂ ಅಪ್ಪ ಅಮ್ಮನಿಗೆ ಬೈದಿರುತ್ತಾರೆ ಎಂದು ನನ್ನ ಬಗ್ಗೆ ಉಲ್ಲೇಖಿಸಿರುವ ವಿಚಾರ ಸತ್ಯಕ್ಕೆ ದೂರವಾಗಿದೆ ಎಂದು ಮೆಸ್ಕಾಂ ಇಲಾಖೆಯ ಎಇಇ ಅವರು ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದ ವಸಂತ ಬಂಗೇರ ಅವರು ಈ ವಿಚಾರದ ಕುರಿತಾಗಿ ಶಾಸಕ ಹರೀಶ್ ಪೂಂಜರು ನನಗೆ ಯಾವುದೇ ದೂರವಾಣಿ ಕರೆ ಮಾಡಿಲ್ಲ. ಮಾಜಿ ಶಾಸಕ ವಸಂತ ಬಂಗೇರರು ನನಗೆ ದೂರವಾಣಿ ಕರೆ ಮಾಡಿಲ್ಲ ಎಂದು ನಾನು ಸ್ಪಷ್ಟನೆ ಬಯಸಿ ಕೇಳಿದ್ದ ಪತ್ರಕ್ಕೆ ಮೆಸ್ಕಾಂ ಎಇಇ ಅವರು ಲಿಖಿತ ಸ್ಪಷ್ಟೀಕರಣ ನೀಡಿದ್ದಾರೆ ಎಂದು ವಸಂತ ಬಂಗೇರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಾರ್ವಜನಿಕರಿಗೆ ತೊಂದರೆ: ದೋಸೆ ಹಬ್ಬವನ್ನು ಬಸ್ ನಿಲ್ದಾಣದಲ್ಲಿ ಮಾಡಿರುವುದು ಖಂಡನೀಯ. ಬಸ್‌ಗಳಿಗೆ ಒಳಗೆ ಬರುವ ಅವಕಾಶವಿಲ್ಲ, ಜನರು ಬಸ್ ತಂಗುದಾಣದಲ್ಲಿ ಕುಳಿತುಕೊಳ್ಳದ ಪರಿಸ್ಥಿತಿ ನಿರ್ಮಾಣವಾಗಿದೆ. ಸುಡುಮದ್ದು, ಭಜನೆ, ಸಂಗೀತ, ನೃತ್ಯವನ್ನು ಬಸ್ ನಿಲ್ದಾಣದಲ್ಲಿ ಮಾಡಿದ್ದಾರೆ. ಬಸ್‌ನಿಲ್ದಾಣದಲ್ಲಿ ಈ ರೀತಿಯ ಕಾರ್ಯಕ್ರಮ ಮಾಡಲು ಬಿಡಬಾರದು. ಕೆಎಸ್‌ಆರ್‌ಟಿಸಿ, ಪೊಲೀಸ್, ಪಟ್ಟಣ ಪಂಚಾಯತ್ ಹಾಗೂ ತಹಶೀಲ್ದಾರ್ ಅನುಮತಿ ಪಡೆದು ಕಾರ್ಯಕ್ರಮ ನಡೆಸಬೇಕು. ಆದರೆ ಪ.ಪಂ.ಮುಖ್ಯಾಧಿಕಾರಿ ಅನುಮತಿ ನೀಡಿಲ್ಲ ಎಂದು ಹೇಳುತ್ತಾರೆ ಮತ್ತೆ ಎನ್‌ಒಸಿ ನೀಡಿದ್ದೇನೆ ಎನ್ನುತ್ತಾರೆ. ಕಾನೂನು ಎಲ್ಲರಿಗೂ ಒಂದೇ. ಅಧಿಕಾರಿಗಳು ಪೂಂಜರ ಹೆದರಿಕೆಯಿಂದ ಮಾಡಿದ್ದಾರ ಅಥವಾ ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ ಎಂಬ ಭ್ರಮೆಯಲ್ಲಿದ್ದಾರ ಎಂದು ಗೊತ್ತಿಲ್ಲ ಎಂದು ಹೇಳಿದ ವಸಂತ ಬಂಗೇರ ಅವರು ದೋಸೆ ಹಬ್ಬದ ಪ್ರಯುಕ್ತ ಬೆಳ್ತಂಗಡಿ ನಗರದಲ್ಲಿ ಬ್ಯಾನರ್ ಅವಳಡಿಸಲು ಅರ್ಜಿ ಸ್ವೀಕೃತವಾಗಿರುವುದಿಲ್ಲ ಹಾಗೂ ಅನುಮತಿ ನೀಡಿರುವುದಿಲ್ಲ ಎಂದು ಪ.ಪಂ. ಮುಖ್ಯಾಧಿಕಾರಿ ಹಿಂಬರಹ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಬಂಗೇರ ತಿಳಿಸಿದರು.

ಪೂಂಜರನ್ನು ಜನರು ವಿದ್ಯುತ್ ಕಳ್ಳ ಎಂದು ಕರೆಯುತ್ತಾರೆ: ಬೆಳ್ತಂಗಡಿಯ ಅಧಿಕಾರಿಗಳು ಬಿಜೆಪಿ ಸರಕಾರದ ಗುಂಗಿನಲ್ಲಿದ್ದಾರೆ. ಕಬ್ಬಿಣ ರಾಡ್‌ನ ಕಂಬ ಹಾಕಿ ದೀಪಾಲಂಕಾರ ಮಾಡಿದ್ದಾರೆ. ಅದು ಕೂಡ ವಿದ್ಯುತ್ ಕಂಬದ ಬದಿಯಲ್ಲಿ. ಅದರಿಂದ ನೇರ ಕನೆಕ್ಷನ್ ಮಾಡಿದ್ದಾರೆ. ಕೇಲವು ಕಡೆಗಳಲ್ಲಿ ಕಂಬಗಳು ಅಪಾಯದ ರೀತಿಯಲ್ಲಿತ್ತು. ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭ ಗೋವಿಂದ ಸ್ಪರ್ಧೆಯಲ್ಲಿ ಒಬ್ಬ ಯುವಕ ಬಲಿಯಾಗಿದ್ದಾನೆ. ಹಾಗೆಯೇ ಪೂಂಜರ ಫ್ಲೆಕ್ಸ್ ಹಾಕಲು ಹೋದ ಸಂದರ್ಭ ಕಬ್ಬಿಣ ಕಂಬ ವಿದ್ಯುತ್ ತಂತಿಗೆ ತಗುಲಿ ಯುವಕ ಪ್ರಾಣ ತೆತ್ತಿದ್ದಾನೆ. ಪೂಂಜರನ್ನು ಜನರು ವಿದ್ಯುತ್ ಕಳ್ಳ ಎಂದು ಕರೆಯುತ್ತಾರೆ ಎಂದು ವಸಂತ ಬಂಗೇರ ಹೇಳಿದರು.

ತಾಲೂಕಿನಲ್ಲಿ ಮರಳು ದಂಧೆ: ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟವಾಗುತ್ತಿದೆ. ಮರಳು ದಂಧೆಯಲ್ಲಿ ಪೊಲೀಸರು, ಪಿಡಿಓ, ಗಣಿಗಾರಿಕೆ ಇಲಾಖೆ, ತಹಶೀಲ್ದಾರ್ ಸುರೇಶ್ ಕುಮಾರ್ ಶಾಮೀಲು ಆಗಿದ್ದಾರೆ. ರಾತ್ರಿ ಹೊತ್ತು ಲಾರಿಗಳಲ್ಲಿ ಮೂಡಿಗೆರೆಯತ್ತ ಮರಳು ಸಾಗಾಟವಾಗುತ್ತಿದೆ. ಇದಕ್ಕೆ ಶಾಸಕರ ಪ್ರೋತ್ಸಾಹವಿದೆ. ಮುಂಡಾಜೆ ಪರಿಸರದಲ್ಲಿ ಬೆಳಗಿನ ಜಾವ ವಾಂಕಿಗ್ ಹೋಗುವಾಗ ಕ್ಲಿಷ್ಟಕರ ಮರಳು ಸಾಗಾಟ ಲಾರಿಗಳು ವೇಗದಲ್ಲಿ ಸಂಚರಿಸುತ್ತಿದೆ. ಆದರೆ ಚಾರ್ಮಾಡಿಯಲ್ಲಿ 2 ಗೇಟ್‌ಗಳನ್ನು ದಾಟಿ ಹೋಗುತ್ತಿದ್ದು ಪೊಲೀಸ್ ಮತ್ತು ಅರಣ್ಯ ಇಲಾಖೆ ಏನು ಮಾಡುತ್ತಿದೆ. ಪೊಲೀಸರಿಗೆ ತಿಂಗಳಿಗೆ 5 ಲಕ್ಷ ರೂ ಹಾಗೂ ಪಂಚಾಯತ್‌ಗೆ 2 ಲಕ್ಷ ಹಣ ಬರುತ್ತದೆ. ಈ ಬಗ್ಗೆ ಸಚಿವರಿಗೆ, ಡಿಎಫ್‌ಓ, ಎಸ್.ಪಿಗೆ ಪತ್ರ ಬರೆಯುತ್ತೇನೆ ಎಂದು ವಸಂತ ಬಂಗೇರ ಹೇಳಿದರು.

ಸರಿಯಾದ ಪ್ರಾಯಶ್ಚಿತ್ತ ನೀಡಿ: ಮಾರಿಗುಡಿ ದೇವಿಗೆ ಸರಿಯಾದರೆ ನನಗೆ ಸರಿ ಎಂದು ಪೂಂಜರು ಹೇಳಿದ್ದಾರೆ. ನಾನು ತಪ್ಪು ಮಾಡಿದರೆ ಮೊದಲು ನನಗೆ ಪ್ರಾಯಶ್ಚಿತ್ತ ನೀಡಿ. ಪೂಂಜರು ಹೇಳಿದ್ದು ಸುಳ್ಳಾದರೆ ಅವರಿಗೆ ಸರಿಯಾದ ಪ್ರಾಯಶ್ಚಿತ್ತ ನೀಡಿ ಎಂದು ವಸಂತ ಬಂಗೇರ ಹೇಳಿದರು.

ಪೂಂಜರೇ ತಲ್ವಾರ್ ಪ್ರಕರಣ ಏನಾಯಿತು: ತಾಲೂಕಿನ ೮೧ ಗ್ರಾಮಗಳಲ್ಲಿ 1-3 ಬ್ಯಾನರ್‌ಗಳಿಗೆ ಅನುಮತಿ ಪಡೆದು ಸಾವಿರಾರು ಬ್ಯಾನರ್ ಅವಳಡಿಸುತ್ತಿದ್ದಾರೆ. ಪೂಂಜರ ತಲ್ವಾರ್ ಪ್ರಕರಣ ಏನಾಯಿತು. ಪ್ರಕರಣ ಸಿಐಡಿಗೆ ಹಾಕಿದ್ದಾರೆ ತನಿಖೆ ಏನಗಿದೆ ಎಂದು ತಿಳಿಯಬೇಕು ಎಂದು ಹೇಳಿದ ವಸಂತ ಬಂಗೇರ ಅವರು ತಾಲೂಕಿನಲ್ಲಿ ಅಧಿಕ ಕೇಸ್ ದಾಖಲಿಸಿಕೊಂಡ ಶಾಸಕರಲ್ಲಿ ಹರೀಶ್ ಪೂಂಜ ಅಗ್ರಗಣ್ಯರು. ಪೂಂಜರು ನನಗೆ 80ರ ಹತ್ತಿರ ಹತ್ತಿರ ಪ್ರಾಯದವರು ಎಂದಿದ್ದಾರೆ. ಆದರೆ ನನಗೆ 78 ವರ್ಷ ಎಂದು ಹೇಳಿದರಲ್ಲದೆ ಪೂಂಜರಿಗೆ 18 ವರ್ಷ ನಡಿಯುತ್ತಾ ಇದೆಯಾ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಮತ್ತು ಜಯವಿಕ್ರಮ್ ಕಲ್ಲಾಪು ಉಪಸ್ಥಿತರಿದ್ದರು.ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕೆ ಸ್ವಾಗತಿಸಿ, ಮಾಜಿ.ಜಿ.ಪಂ.ಸದಸ್ಯ ಶೇಖರ್ ಕುಕ್ಕೇಡಿ ವಂದಿಸಿದರು.

ಸ್ಪಷ್ಟನೆ: ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಎಇಇ ಎಂದು ಉಲ್ಲೇಖಿಸಿದ್ದರು.ಆದರೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಎಇಇ ಶಿವಶಂಕರ್ ಎಂದು ಉಲ್ಲೇಖಿಸಿದೆ.ಎಇಇ ಶಿವಶಂಕರ್ ಅವರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ.

LEAVE A REPLY

Please enter your comment!
Please enter your name here