ವೇಣೂರು: ಭಾರತೀಯ ಆತ್ಮ ಹಿಂದುತ್ವ.ಆ ಹಿಂದುತ್ವ ನಂಬಿಕೆ ಮತ್ತು ಭಾವನೆಗಳ ಮೇಲೆ ನಿಂತಿರುವ ಸಮಾಜವಾಗಿದೆ. ಹಿಂದೂ ಧರ್ಮದ ನಂಬಿಕೆಗಳು ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ತೋರಿಸುತ್ತದೆ. ಸಂಸ್ಕಾರ ಸಂಸ್ಕೃತಿಯಲ್ಲಿ ಬಹುತೇಕ ಭಗವಂತನನ್ನೇ ಮುಂದಿಟ್ಟು ಆರಾಧನೆಗಳನ್ನು ಮಾಡುತ್ತೇವೆ. ಹಾಗಾಗಿ ಭಾರತದಲ್ಲಿ ಭೂಮಿ ಮತ್ತು ಸ್ತ್ರೀ ಪರಮಶ್ರೇಷ್ಠವಾಗಿದೆ ಎಂದು ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ವೇಣೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಶಂಕರಪುರ ಏಕಜಾತಿ ಧರ್ಮ ಪೀಠ, ಧ್ವರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ದಿವ್ಯ ಸಂಕಲ್ಪದಂತೆ ನ.19 ರಂದು ಮೂಗುತಿ ಧಾರಣೆ ಆಗದ ತಾಲೂಕಿನ 9 ರಿಂದ 19 ವರ್ಷದ 300 ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ತಿಲಕ, ಮೂಗುತಿ, ಕೈಗೆ ಬಳೆ, ಹೂ ಮುಡಿಯುವಂತಹದು ಸಂಸ್ಕಾರದ ಭಾಗವಾಗಿ ಜೋಡಿಸುತ್ತಾ ಹೋಗಿದ್ದೇವೆ. ಒಂದು ದೇವಸ್ಥಾನದಲ್ಲಿ ಮೂಗುತಿ ಧಾರಣೆಯಂತ ಅದ್ಭುತ ಚಿಂತನೆ.ರಾಜ್ಯದಲ್ಲೇ ಮೊದಲ ಕಾರ್ಯಕ್ರಮ ವೇಣೂರಿನಲ್ಲಿ ಮೂಡಿಬಂದಿದೆ.ಮುಂದೆ ಜಿಲ್ಲೆಯ ಎಲ್ಲ ದೇವಸ್ಥಾನಗಳಲ್ಲಿ ಸಂಸ್ಕಾರ ಮತ್ತೆ ಮರುಕಳಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.
ಬೆಳ್ತಂಗಡಿ ತಾಲೂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ 300 ಹೆಣ್ಣು ಮಕ್ಕಳಿಗೆ ಉಚಿತ ಚಿನ್ನದ ಮೂಗುತಿ ಧಾರಣೆ ನಡೆಯಿತು. ತಾಲೂಕಿನ ವಿವಿಧ ಕಡೆಯಿಂದ 9 ರಿಂದ 19 ವರ್ಷದೊಳಗಿನ ಹೆಣ್ಣು ಮಕ್ಕಳು ಆಗಮಿಸಿ ಮೂಗುತಿ ಧಾರಣೆಗೆ ಸಹಕರಿಸಿದರು.
ಶಂಕರಪುರ ಏಕಜಾತಿ ಧರ್ಮ ಪೀಠ, ಧ್ವರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಆಶೀರ್ವಚನ ನೀಡಿದರು.ಶಾಸಕ ಹರೀಶ್ ಪೂಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಎನ್. ಪುರುಷೋತ್ತಮ ರಾವ್, ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿಇ, ಮೀನಾಕ್ಷಿ, ವೇಣೂರು ಸತೀಶ್ ಮಡಿವಾಳ ಉಪಸ್ಥಿತರಿದ್ದರು.