ಉರುವಾಲುಪದವು: ಕಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉರುವಾಲು ಪದವು ಕನ್ನಡ ಶಾಲೆಯನ್ನು ಉಳಿಸುವಂತೆ ಆಗ್ರಹಿಸಿ ಹಳೆ ವಿದ್ಯಾರ್ಥಿ ಸಂಘ ಹಾಗೂ ಕನ್ನಡ ವಿಧ್ಯಾಭಿಮಾನಿಗಳ ತಂಡದ ವತಿಯಿಂದ ಶಾಲಾ ವಠಾರದಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು.
ಉರುವಾಲು ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಸ್ಥೆ 1956 ರಲ್ಲಿ ಆರಂಭಗೊಂಡ ಸಂಸ್ಥೆಯಾಗಿದೆ. ಈ ಶಾಲೆಯಲ್ಲಿ ಸುಮಾರು 400ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಪಡೆದುಕೊಂಡು ಹೋಗುತ್ತಿದ್ದರು.ಈ ಶಾಲೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು ಇದೀಗ ಸದ್ರಿ ಶಾಲೆಯ ಆವರಣದೊಳಗಡೆಯೇ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಗೊಂಡಿದೆ.ಆಂಗ್ಲ ಮಾಧ್ಯಮ ಶಾಲೆ ಸಮಿತಿಯವರ ಪ್ರಚೋದನೆಯಿಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಬರುತ್ತಿದ್ದಾರೆ. ಈಗ ಕೇವಲ 36 ವಿಧ್ಯಾರ್ಥಿಗಳು ಮಾತ್ರ ಇದ್ದಾರೆ. ಮುಂದಿನ ದಿನಗಳಲ್ಲಿ ಈ ಕನ್ನಡ ಶಾಲೆ ಸಂಪೂರ್ಣವಾಗಿ ರದ್ದುಗೊಳ್ಳವ ಸಾಧ್ಯತೆ ಇರುವುದರಿಂದ ಈಗಾಗಲೇ ಕನ್ನಡ ಮಾಧ್ಯಮ ಶಾಲೆಗೆ ಕಾದಿರಿಸಿದ ಸ್ಥಳದಲ್ಲಿ ನಿರ್ಮಿಸಲಾದ ಅಕ್ರಮ ಆಂಗ್ಲ ಮಾಧ್ಯಮ ಶಾಲೆಯನ್ನು ರದ್ದು ಗೊಳಿಸಿ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿಕೊಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿಯವರು ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದರು.
ಮನವಿ ಸ್ವೀಕರಿಸಿದ ತಾರಾಕೇಸರಿಯವರು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಎಂದು ಭರವಸೆ ನೀಡಿದರು.ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಶಿಕ್ಷಣ ಇಲಾಖೆಯ ಸಿಆರ್‌ಪಿ ಸಂಧ್ಯಾ, ಸ್ಥಳೀಯರಾದ ಅಬ್ಬಾಸ್ ಪಾಲೆತ್ತಡಿ, ಮುಹಮ್ಮದ್ ಪೀರ್ಯ, ರಿಯಾಝ್, ನವಾಝ್, ರಹೀಂ, ಜಾಫರ್, ಶಕೀರ್ ಉರುವಾಲು, ಲತೀಫ್ ಮಾಪಾಲು, ಹಂಝ ಶೂಂಠಿಪಳಿಕೆ, ಸಲೀಂ, ಯಾಕೂಬು ಮಾಪಾಲು, ಮುನವ್ವರ್ ಉರುವಾಲು, ಕರ್ನಾಟಕ ರಾಜ್ಯ ಕನ್ನಡ ಸಮಿತಿ ಪಕ್ಷದ ಪ್ರವೀಣ್ ಪಿರೇರಾ, ವಿನ್ನೀ ಪಿಂಟೊ, ಸುನೀತಾ, ರೊಝಾರಿಯೊ, ದಯಾನಂದ, ಸೂಝೀ ಪ್ರಕಾಶ್, ಯಶೋದ, ಖಲಂದರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಸ್‌ಐ ರಾಜೇಶ್ ಕೆ.ವಿ. ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.